ಗುಂಡ್ಲುಪೇಟೆ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಎನ್.ಬಸವರಾಜಪ್ಪ, ಉಪಾಧ್ಯಕ್ಷರಾಗಿ ಕಲಿಗೌಡನಹಳ್ಳಿ ರಾಜು ಆಯ್ಕೆಯಾದರು.
ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎಂ.ಎನ್.ಬಸವರಾಜಪ್ಪ 10 ಮತ, ಉಪಾಧ್ಯಕ್ಷ ಸ್ಥಾನಕ್ಕೆ ಕಲಿಗೌಡನಹಳ್ಳಿ ರಾಜು 10 ಮತ ಗಳಿಸಿ ಜಯ ಗಳಿಸಿದರು. ಬಿಜೆಪಿಯ ಕಮರಹಳ್ಳಿ ರವಿ(6) ಹಾಗೂ ಅರಸಶೆಟ್ಟಿ(6) ಮತಗಳಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಮೂವರು ನಾಮ ನಿರ್ದೇಶಕರ ಬೆಂಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 20 ತಿಂಗಳ ಅವಧಿಗೆ ಬಿಜೆಪಿಯ ಕಮರಹಳ್ಳಿ ರವಿ ಅಧ್ಯಕ್ಷ, ಸೋಮನಪುರ ವೆಂಕಟನಾಯ್ಕ ಉಪಾಧ್ಯಕ್ಷರಾಗಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂವರು ನಾಮ ನಿರ್ದೇಶಿತರನ್ನು ಹೊಸದಾಗಿ ನೇಮಕ ಮಾಡಿದ್ದರಿಂದ ಎರಡೂ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಮೆಶ್ ಬಾಬು ಕಾರ್ಯನಿರ್ವಹಿಸಿದರು. ನೂತನ ಪದಾಧಿಕಾರಿಗಳನ್ನು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್, ನಿರ್ದೇಶಕರಾದ ಪಿ.ಮಹದೇವಪ್ಪ, ಆರ್.ಎಸ್.ನಾಗರಾಜು, ಮುಖಂಡರಾದ ಎಚ್.ಎನ್.ಬಸವರಾಜು, ಎಚ್.ಬಿ.ನಾಗರಾಜು, ಶಿವಮಾದಪ್ಪ, ದೀಪು, ಲೋಕೇಶ್ ಇತರರು ಅಭಿನಂದಿಸಿದರು.