ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯಕ್ಕೆ ನೀರು ಹರಿಸಲು ನೆರವಾಗುವ
ಟ್ರಾನ್ಸ್‌ಫಾರ್ಮರ್ ಕೆಟ್ಟುಹೋಗಿದ್ದು, ಅಧಿಕಾರಿಗಳು ರಿಪೇರಿಗೆ ಕ್ರಮ ವಹಿಸಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ನೆರೆ ಪ್ರವಾಹದ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ 2018 ರಲ್ಲಿ ಕ್ಷೇತ್ರ ವ್ಯಾಪ್ತಿಯ ರಾಮನಗುಡ್ಡೆ, ಹುಬ್ಬೆಹುಣಸೆ ಹಾಗೂ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಗೆ 132 ಕೋಟಿ ರೂ ಅನುದಾನ ನೀಡಿದ್ದರು.
ಇದರಲ್ಲಿ ಗುಂಡಾಲ್ ಜಲಾಶಯದ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆಯಾಗುತ್ತಿದೆ. ಆದರೆ ಉಳಿದೆರೆಡು (ರಾಮನಗುಡ್ಡೆ, ಹುಬ್ಬೆಹುಣಸೆ )ಜಲಾಶಯಕ್ಕೆ ಹೆಚ್ಚುವರಿ ಪೈಪ್‌ಲೈನ್ ಕಾಮಗಾರಿಗೆ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ. ಈ ಸಂಬಂಧ 6.5 ಕೋಟಿ ರೂ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ನರೇಂದ್ರ ವಿವರಿಸಿದರು.
ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಗುಂಡಾಲ್ ಜಲಾಶಯಕ್ಕೆ ನೀರು ಪೂರೈಕೆಗಾಗಿ ಅಳವಡಿಸಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೂ ನೀರು ನುಗ್ಗಿದೆ. ರಿಪೇರಿ ಮಾಡಿಸಿ ನೀರು ಪೂರೈಕೆ ಮಾಡುವಂತೆ ಸಲಹೆ ನೀಡಲಾಗಿದೆ ಎಂದು ಅವರು ಹೇಳಿದರು.