ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕು ಅಂತರ್ಜಲ ಮಟ್ಟ ಕುಸಿತದಿಂದ ಸಮಸ್ಯೆಗೊಳಗಾಗಿದ್ದರಿಂದ ಕೇಂದ್ರ ಸರ್ಕಾರ ಅಟಲ್ ಭೂಜಲ ಯೋಜನೆ ಮೂಲಕ ಸುಧಾರಣೆಗೆ ಕ್ರಮ ಕೈಗೊಂಡಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಮಲಿಂಗಯ್ಯ ಹೇಳಿದರು.
ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗುರುವಾರ ತಾಲೂಕಿನ ಬೇಗೂರು ಗ್ರಾಮದಲ್ಲಿ ಅಟಲ್ ಭೂಜಲ ಯೋಜನೆ ಕುರಿತ ಜಾಥಾ ಹಾಗೂ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಚ್ಚು ಅಂತರ್ಜಲ ಬಳಕೆ ಮಾಡಿಕೊಂಡ ತಾಲೂಕುಗಳಲ್ಲಿ ಗುಂಡ್ಲುಪೇಟೆಯೂ ಸೇರಿದ್ದು ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆ ಯೋಜನೆ ಕೈಗೊಳ್ಳಲಾಗಿದೆ. ನೀರಿನ ಮಿತಬಳಕೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಹಾಗೂ ಕೃಷಿ ಚಟುವಟಿಕೆಗಳಿಗೆ ಹನಿ ನೀರಾವರಿ ಅಳವಡಿಕೆ ಹಾಗೂ ಹೆಚ್ಚು ನೀರು ಕೇಳುವ ಬೆಳೆಗಳ ಬದಲು ಕಡಿಮೆ ನೀರು ಬಳಸುವ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಮನವರಿಕೆ ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾಗಿ ಚೆಕ್ ಡ್ಯಾಂ ನಿರ್ಮಾಣ ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಜಾಥಾ ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಮಹದೇವಸ್ವಾಮಿ, ಸದಸ್ಯರು, ಪಿಡಿಒ ಪ್ರಸಾದ್, ಅಟಲ್ ಭೂಜಲ್ ಯೋಜನೆಯ ಜಿಲ್ಲಾ ಸಂಯೋಜಕ ಅರುಣ್ ಕುಮಾರ್, ಸಂತೋಷ್, ನಿಶ್ಚಿತಾ ಇದ್ದರು.