ಸಾಗರ ತಾಲೂಕು ವರದಮೂಲದಲ್ಲಿ ಡಾ. ಕೆಳದಿ ವೆಂಕಟೇಶ್ ಜೋಯಿಸ್ ಸಂಪಾದಿತ ಡಾ. ಕೆಳದಿ ಗುಂಡಾ ಜೋಯಿಸ್ ಕುರಿತ ‘ಪರಂಧಾಮ’ ಕೃತಿಯನ್ನು ಪ.ರಾ.ಕೃಷ್ಣಮೂರ್ತಿ ಬಿಡುಗಡೆಗೊಳಿಸಿದರು. ದಿನೇಶಕುಮಾರ್ ಜೋಷಿ, ವಿ.ಟಿ.ಸ್ವಾಮಿ, ಮಾ.ಸ.ನಂಜುಂಡಸ್ವಾಮಿ, ರಾಮಚಂದ್ರ ಇತರರಿದ್ದರು.  
ಜಿಲ್ಲೆ

ಗುಂಡಾ ಜೋಯಿಸ್ ಸರಳತೆ ಅನುಕರಣೀಯ

Shivamogga - Desk - Vinayakumar D B

ಸಾಗರ: ಗುಂಡಾ ಜೋಯಿಸ್ ಅವರ ಸಂಶೋಧನಾ ಕಾರ್ಯ ಜಗತ್ತಿಗೇ ಮಾದರಿ. ಶ್ರೇಷ್ಠ ಸಂಶೋಧಕರ ಸಾಲಿನಲ್ಲಿ ಡಾ. ಕೆಳದಿ ಗುಂಡಾ ಜೋಯಿಸ್ ಅಗ್ರಗಣ್ಯರು ಎಂದು ಸಂಸ್ಕಾರ ಭಾರತಿಯ ಪ್ರಮುಖ ಪ.ರಾ.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ವರದಾಮೂಲದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಡಾ. ಕೆಳದಿ ವೆಂಕಟೇಶ್ ಜೋಯಿಸ್ ಸಂಪಾದಿತ ಡಾ. ಕೆಳದಿ ಗುಂಡಾ ಜೋಯಿಸ್ ಕುರಿತ ‘ಪರಂಧಾಮ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಗುಂಡಾ ಜೋಯಿಸರ ಸರಳತೆ, ಸಹೃದಯತೆ, ಅಧ್ಯಯನಶೀಲತೆ ಹೊಸ ತಲೆಮಾರಿಗೆ ಅನುಕರಣೀಯ. 94ರ ಇಳಿ ವಯಸ್ಸಿನಲ್ಲಿಯೂ ಸದಾ ಲವಲವಿಕೆಯಿಂದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಅವರಲ್ಲಿ ಅಪಾರ ನೆನಪಿನ ಶಕ್ತಿ ಇತ್ತು. ದೇಶವಿದೇಶಗಳಲ್ಲಿ ಇತಿಹಾಸ ಕುರಿತು ಅಧ್ಯಯನ ನಡೆಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ಕುರಿತು ಇನ್ನಷ್ಟು ಅಧ್ಯಯನ ನಡೆಯುವ ಅಗತ್ಯವಿದೆ ಎಂದರು.
ಜೋಷಿ ೌಂಡೇಶನ್‌ನ ಅಬಸೆ ದಿನೇಶಕುಮಾರ್ ಜೋಷಿ ಮಾತನಾಡಿ, ಕೆಳದಿ ಇತಿಹಾಸ ಜನಮಾನಸದಲ್ಲಿ ನೆಲೆಯೂರಲು ಡಾ. ಕೆಳದಿ ಗುಂಡಾ ಜೋಯಿಸ್ ಅವರ ನಿರಂತರ ಅಧ್ಯಯನಾಸಕ್ತಿಯೇ ಕಾರಣ. ಮೌನವಾಗಿಯೇ ಇತಿಹಾಸವನ್ನು ಉಳಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡುಹೋಗುವ ಕೆಲಸ ಗುಂಡಾ ಜೋಯಿಸರು ಮಾಡಿದ್ದಾರೆ. ಪುರಾತನ ಲಿಪಿಯನ್ನು ಅಧ್ಯಯನ ನಡೆಸುವ ಮೂಲಕ ಇತಿಹಾಸದ ಹೊಸ ಹೊಸ ಹೊಳಹುಗಳನ್ನು ತೋರಿಸಿಕೊಟ್ಟ ಹೆಗ್ಗಳಿಕೆ ಗುಂಡಾ ಜೋಯಿಸರದ್ದಾಗಿದೆ ಎಂದು ಬಣ್ಣಿಸಿದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಮುಖರಾದ ಮಾ.ಸ.ನಂಜುಂಡಸ್ವಾಮಿ, ರಾಮಚಂದ್ರ ಬೆಂಗಳೂರು, ಸೂರ್ಯನಾರಾಯಣ, ಸುಮನಾ ಜೋಯಿಸ್, ಪ್ರಹ್ಲಾದ್, ಡಾ. ಕೆಳದಿ ವೆಂಕಟೇಶ್ ಜೋಯಿಸ್ ಇತರರಿದ್ದರು.