ಜಿಲ್ಲೆ

ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮಜಯಂತಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಿಶ್ವವಿಖ್ಯಾತ 61 ಅಡಿ ಭಗವಾನ್ ಪಾರ್ಶ್ವನಾಥ ಮೂರ್ತಿ ಸ್ಥಾಪನಾ ಕರ್ತೃ, ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮ ಜಯಂತಿ ಮಹಾ ಮಹೋತ್ಸವನ್ನು ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಸೆ. 18, 19 ಹಾಗೂ 20ರಂದು ಆಯೋಜಿಸಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಜಿಎಂ ಜೈನ ಮಠದ ಅಧ್ಯಕ್ಷ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಎಜಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ, ಹೊರ ರಾಜ್ಯಗಳ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ತಮ್ಮ 50ನೇ ವರ್ಷದ ಜನ್ಮದಿನವನ್ನು ಜನಸಾಮಾನ್ಯರಿಗೆ ಅನುಕೂಲಕರವಾಗುವ ರೀತಿಯಲ್ಲಿ ಆಚರಿಸಲು ಶ್ರೀ ಗುಣಧರನಂದಿ ಮಹಾರಾಜರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಇದಕ್ಕಾಗಿ ಬರುವ ಶೈಕ್ಷಣಿಕ ವರ್ಷದಿಂದ ಐದು ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ. ಈ ಸೌಲಭ್ಯವನ್ನು ಜಾತಿಬೇಧ ಇಲ್ಲದೇ ಎಲ್ಲ ವರ್ಗದ ವಿದ್ಯಾರ್ಥಿಗಳು ಪಡೆಯಬಹುದು.

ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾರ್ಥಿ ಕಾಲಿಟ್ಟರೆ ಆತ 10ನೇ ತರಗತಿವರೆಗೆ ಉಚಿತವಾಗಿ ಓದಬಹುದು. ಅಷ್ಟೇ ಅಲ್ಲ, ವರೂರು ಕ್ಷೇತ್ರದಲ್ಲಿರುವ ಪದವಿ, ಇಂಜಿನಿಯರಿಂಗ್, ಬಿಎಎಂಎಸ್, ಹೋಮಿಯೋಪಥಿ ಶಿಕ್ಷಣ ಮಹಾವಿದ್ಯಾಲಯದಲ್ಲಿಯೂ ಈ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಮುಂದುವರೆಸಬಹುದು. ಈ ವರ್ಷ 15 ರಿಂದ 20 ವಿದ್ಯಾರ್ಥಿಗಳಿಗೆ ಡಿಪ್ಲೋಮಾ, ಆಯುರ್ವೆದ ಹಾಗೂ ಇಂಜಿನಿಯರಿಂಗ್​ಗೆ ಉಚಿತ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ. ಮೆಕಾನಿಕಲ್ ಹಾಗೂ ಸಿವಿಲ್ ಇಂಜಿನಿಯರಿಂಗ್​ಗೆ ತಲಾ ಐವರು ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದರು.

ಈ ಮಹಾಮಹೋತ್ಸವ ಪೂರ್ಣಗೊಂಡ ನಂತರ 1,500 ಬಡ ಜನರಿಗೆ ಉಚಿತವಾಗಿ ಕರ್ನಾಟಕದ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಲು ತೀರ್ಮಾನಿಸಲಾಗಿದೆ. 50 ಜನ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ ಮಾಡಲಾಗುವುದು. 50 ಅನಾಥ ಆಶ್ರಮಗಳಲ್ಲಿ ಆಹಾರ ಒದಗಿಸಲಾಗುವುದು.

ಧಾರ್ವಿುಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ 50 ಗ್ರಾಮಗಳಲ್ಲಿನ ತಲಾ ಒಬ್ಬರಿಗೆ ನವಗ್ರಹ ಪುರಸ್ಕಾರ ನೀಡಲಾಗುವುದು.

ಸೆ. 19ರಂದು ಹಿನ್ನೆಲೆ ಗಾಯಕ ವಿಜಯಪ್ರಕಾಶ ಅವರ ತಂಡ ಹಾಗೂ 20ರಂದು ರಾಜೇಶ ಕೃಷ್ಣನ್ ಅವರ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದೆ. ಹಲವಾರು ಹಿರಿ-ಕಿರಿ ತೆರೆಯ ಕಲಾವಿದರು ಪಾಲ್ಗೊಳ್ಳುವರು ಎಂದು ಹೇಳಿದರು.

ಸೆ. 20 ರಂದು ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಿರುವ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್​ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ದೆಹಲಿಯ ಎನ್​ಸಿಐಎಸ್​ಎಂ ಅಧ್ಯಕ್ಷ ರಘುರಾಮ ಭಟ್ಟ ಉದ್ಘಾಟಿಸುವರು. ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕಿರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಮುಕ್ತಿಮಂದಿರದ ಶ್ರೀ ವಿಮಲ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಸಚಿವರಾದ ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳಕರ, ವಿಆರ್​ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಎಜಿಎಂ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಸಂದೀಪ ಕ್ಯಾತನವರ, ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಕುಲಕರ್ಣಿ ಹಾಗೂ ದೇವೇಂದ್ರಪ್ಪ ಕಾಗೆನವರ ಸುದ್ದಿಗೋಷ್ಠಿಯಲ್ಲಿ ಇದ್ದರು.