ಹುಬ್ಬಳ್ಳಿ : ದೇಶದ ಶಿಕ್ಷಣ ಹಾಗೂ ಧರ್ಮವನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರದಿಂದ ಇರಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಜನ್ಮಜಯಂತಿ ಮಹಾಮಹೋತ್ಸವದ ಮೂರನೇ ಹಾಗೂ ಕೊನೆಯ ದಿನವಾದ ಬುಧವಾರದಂದು ಇಲ್ಲಿನ ವರೂರ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಜಲ, ನೆಲ ರಕ್ಷಿಸುವ ಕಾರ್ಯಕ್ಕೆ ಯುವಕರು ಪಣತೊಡಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ವ್ಯಸನಮುಕ್ತ ಜೀವನ ನಡೆಸಲು ಆದ್ಯತೆ ನೀಡಬೇಕು. ಆ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳುವ ಜತೆಗೆ ಆರ್ಥಿಕವಾಗಿಯೂ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಜೀವಿಸು ಮತ್ತು ಜೀವಿಸಲು ಬಿಡು ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು. ಜೈನ ಧರ್ಮದಲ್ಲಿ ಅಹಿಂಸೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಅಹಿಂಸೆ, ಸಂಯಮ ಹಾಗೂ ತಪಗಳು ಜೀವನದ ಆಧಾರ ಸ್ಥಂಭಗಳು. ಧರ್ಮವನ್ನು ರಕ್ಷಿಸಿದಾಗ ಮಾತ್ರ ನಮ್ಮ ರಕ್ಷಣೆ ಆಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಶಿಕ್ಷಣದ ಜತೆಗೆ ಧರ್ಮ, ಸಂಸ್ಕೃತಿಯ ಪಾಠವೂ ಆಗಬೇಕು. ಅಂದಾಗ ಮಾತ್ರ ವಿದ್ಯಾರ್ಥಿ ತನ್ನ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಲು ಸಹಾಯವಾಗುತ್ತದೆ. ಪರೋಪಕಾರಿ ಗುಣಗಳನ್ನು ಬೆಳೆಸುವ ಶಿಕ್ಷಣ ಸಿಗಬೇಕು. ಪ್ರತಿಯೊಬ್ಬರೂ ಪರಸ್ಪರ ಸುಖ-ದುಃಖಗಳನ್ನು ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಜೈನ ಆಯೋಗ ರಚನೆಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೊಂದಿಗೆ ಮಾತುಕತೆ ನಡೆಸುವುದಾಗಿ ರಾಜ್ಯಪಾಲರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಆಶೀರ್ವಚನ ನೀಡಿ, ಅಲ್ಪಸಂಖ್ಯಾತರೆಂದು ಒಂದು ಸಮಾಜವನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅಲ್ಪಸಂಖ್ಯಾತ ವಿಭಾಗದಲ್ಲಿ ಬರುವ ಎಲ್ಲ ಸಮಾಜದಲ್ಲಿ ಬಡವರು ಇದ್ದಾರೆ. ಹೀಗಾಗಿ, ಎಲ್ಲ ಸಮಾಜಗಳಿಗೂ ಸಮಪರ್ಕ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಸರ್ಕಾರ ಅಗತ್ಯವಿದ್ದಲ್ಲೆ ಮೋಡಬಿತ್ತನೆಯಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಧರ್ಮಗಳು ಮನುಷ್ಯನಿಗೆ ಜೀವನದ ಪಾಠ ಮಾಡುತ್ತವೆ. ಲೋಕಕಲ್ಯಾಣ ಎಲ್ಲ ಧರ್ಮಗಳ ಉದ್ದೇಶ ಎಂದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಜೈನ ಆಯೋಗ ರಚನೆಗೆ ಸಂಬಂಧಿಸಿದಂತೆ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಭಟ್ಟಾರಕರಾದ ಅಮ್ಮಿನಬಾವಿಯ ಧರ್ಮಸೇನ, ಹೊಂಬುಜದ ದೇವೇಂದ್ರಕೀರ್ತಿ, ಸೋಂದಾದ ಭಟ್ಟಾಕಲಂಕ, ಎನ್ಆರ್ ಪುರದ ಲಕ್ಷ್ಮೀಸೇನ, ತಿಜಾರಾದ ಸೌರಭಸೇನ, ಕೊಲ್ಲಾಪುರದ ಲಕ್ಷ್ಮೀಸೇನ, ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕರು ಸಾನ್ನಿಧ್ಯ ವಹಿಸಿದ್ದರು.
ಸಭಾಪತಿ ಬಸವರಾಜ ಹೊರಟ್ಟಿ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಲ, ಎಸ್ಡಿಎಂ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರ ಹೆಗ್ಗಡೆ, ಡಾ. ಎನ್.ಎ. ಮುಗದಮ್ ಚಿತ್ರನಟ ಶರಣ, ತವನಪ್ಪ ಅಷ್ಟಗಿ ಹಾಗೂ ಇತರರು ಇದ್ದರು.