ಯೋಜನೆಗಳಿಗೆ ಸಂಪನ್ಮೂಲದ ಕೊರತೆಯುಂಟಾಗುತ್ತಿರುವ ಕಾರಣ ವಿವಿಧ ಕಾಯ್ದೆ ಬಳಸಿ ಹಣ ಪಾವತಿಸಲು ಸರ್ಕಾರ ಮುಂದಾಗಿದ್ದು, ಇದೀಗ ಬಂದೂಕು ನವೀಕರಣಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಲು ಜಿಲ್ಲಾ ನೋಂದಣಾಽಕಾರಿ ಸುತ್ತೋಲೆ ಹೊರಡಿಸಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದ್ರಾಂಕ ಕಾಯ್ದೆ ೧೯೫೭ರ ಕಲಂ ೬೭ಬಿ ಅಡಿ ನೋಂದಣಿಯೇತರ ದಸ್ತಾವೇಜಿಗಳಿಂದ ಮುದ್ರಾಂಕ ಶುಲ್ಕ ವಸೂಲಾತಿಗೆ ಬೆಂಗಳೂರು ನೋಂದಣಿ ಮಹಾಪರೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ನ.೧೧ರಂದು ಪತ್ರ ಹೊರಡಿಸಿದ್ದಾರೆ. ಜಿಲ್ಲಾಽಕಾರಿಗಳಿಂದ ಪಡೆದ ಬಂದೂಕು ಲೈಸೆನ್ಸ್‌ಗಳಿಗೆ ಕರ್ನಾಟಕ ಮುದ್ರಾಂಕ ಕಾಯ್ದೆಯ ಆರ್ಟಿಕಲ್ ೩೨(ಎ) ಅಡಿಯಲ್ಲಿ ಶುಲ್ಕ ಪಾವತಿಸಲು ಸೂಚನೆ ಹೊರಡಿಸಲಾಗಿದೆ.
ಬಂದೂಕು ಲೈಸೆನ್ಸ್‌ದಾರರಿಗೆ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆಯಾದರೂ, ಯಾವಾಗಿನಿಂದ ಪಾವತಿಸಬೇಕೆಂದು ತಿಳಿಸಿಲ್ಲ. ನೋಂದಣಿ ಅಽಕಾರಿಗಳ ಪ್ರಕಾರ ಎಲ್ಲ ಶುಲ್ಕವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಜಿಲ್ಲಾಽಕಾರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಆದರೆ ಅಽಕಾರಿಗಳಿಗೆ ಹಲವು ಮಂದಿಯ ಪರವಾನಗಿ ಐದು ವರ್ಷಕ್ಕೆ ಈಗಾಗಲೇ ನವೀಕರಣವಾಗಿದೆ ಎಂಬ ವಿಚಾರವೇ ತಿಳಿದಿಲ್ಲ.
*ಶುಲ್ಕಕ್ಕಿಂತ ಅಂಚೆ ವೆಚ್ಚ ಅಽಕ:
೩೦ರಿಂದ ೫೦ ರೂ. ಶುಲ್ಕ ಪಾವತಿಸುವಂತೆ ಪರವಾನಗಿದಾರರಿಗೆ ಸೂಚಿಸಲು ನೋಂದಣಿ ಅಂಚೆ ಮತ್ತು ಸ್ವೀಕೃತಿ ರವಾನಿಸಲು ಸರ್ಕಾರ ಅಂಚೆ ಇಲಾಖೆಗೆ ೩೦ ರೂ. ವ್ಯಯಿಸಿದೆ. ಇಂತಹ ದುಂದುವೆಚ್ಚ ಮಾಡುವ ಬದಲು ಅಂಚೆ ಇಲಾಖೆಗೆ ವ್ಯಯಿಸಿದ ಹಣವನ್ನೇ ಸರ್ಕಾರದ ಖಜಾನೆಗೆ ಉಳಿಸಬಹುದಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಸುಮಾರು ೧೦೦ರಿಂದ ೨೫೦ ರೂ. ಖರ್ಚು ಮಾಡಿಕೊಂಡು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಜನರಿಗೆ ಎದುರಾಗಿದೆ.
೨೦ ಸಾವಿರ ಕೋವಿ ಪರವಾನಗಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೨೦ ಸಾವಿರ ಕೋವಿ ಪರವಾನಗಿ ಇದ್ದು, ಪ್ರತಿಯೊಬ್ಬರಿಂದ ೩೦ರಿಂದ ೫೦ ರೂ. ಹೆಚ್ಚುವರಿ ಶುಲ್ಕ ವಸೂಲಾತಿ ನಡೆಯಲಿದೆ. ಪರವಾನಗಿ ನವೀಕರಣಕ್ಕೆ ಐದು ವರ್ಷಕ್ಕೆ ೨,೫೦೦ ರೂ. ಪಡೆಯಲಾಗುತ್ತಿದ್ದು, ಇನ್ನು ಹೆಚ್ಚುವರಿಯಾಗಿ ೨೫೦ ರೂ. ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೆಲವು ಮಂದಿಗೆ ಸೂಚನಾ ಪತ್ರ ನೋಂದಾಯಿತ ಅಂಚೆ ಮೂಲಕ ಕೈಸೇರಿದರೆ ಇನ್ನುಳಿದವರಿಗೆ ಸದ್ಯವೇ ಬರಬಹುದೆಂಬುದು ಅಽಕಾರಿಗಳ ಮಾತು.
ಕಚೇರಿಗೆ ತಪ್ಪದ ಅಲೆದಾಟ
ಕೋವಿ ಪರವಾನಗಿ ನವೀಕರಣಕ್ಕೆ ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತ ಕಚೇರಿಗೆ ಪರವಾನಗಿದಾರರು ಹೋಗಬೇಕಾಗಿದೆ. ಕೆಲವು ಪ್ರಕರಣದಲ್ಲಿ ನವೀಕರಣದ ವಿಚಾರಣೆಗೆ ಪೊಲೀಸ್ ಠಾಣೆಗೂ ಅಲೆಯಬೇಕಾಗಿದೆ. ಮುದ್ರಾಂಕ ಕಾಯ್ದೆಯಡಿಯಲ್ಲಿ ಶುಲ್ಕ ಪಾವತಿಗೆ ಜಿಲ್ಲಾ ನೋಂದಣಿ ಕಚೇರಿಗೆ ಪ್ರತಿ ವರ್ಷ ಪರವಾನಗಿ ಸಹಿತ ಹೋಗಬೇಕಾಗಿದೆ. ಆನ್‌ಲೈನ್ ವ್ಯವಸ್ಥೆಯಲ್ಲಿ ಪಾವತಿ ವ್ಯವಸ್ಥೆಯಿದ್ದರೂ ಸರ್ಕಾರಿ ವ್ಯವಸ್ಥೆಗಳಲ್ಲಿ ಇದ್ಯಾವುದೂ ಇನ್ನೂ ಜಾರಿಯಾಗಿಲ್ಲ. ಇದರಿಂದ ಜನರಿಗೆ ಕಚೆರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಲನ್ ಪಡೆಯಲಾಗಿತ್ತು
೨೦೨೩ರ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟ ಬಂದೂಕಿಗೂ ೨೦೦ ರೂ. ಚಲನ್ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದನ್ನು ಶಾಸಕ ಅಶೋಕ್ ಕುಮಾರ್ ರೈ ಸದನದಲ್ಲಿ ಪ್ರಶ್ನಿಸಿದ ಬಳಿಕ ಆದೇಶ ಹಿಂಪಡೆಯಲಾಗಿತ್ತು. ೨೦೨೪ರ ಚುನಾವಣೆ ಸಂದರ್ಭ ಕೋವಿ ಠೇವಣಾತಿಯನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ೯ ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದು, ಎಲ್ಲ ಕೃಷಿಕರಿಗೆ ಠೇವಣಾತಿಯಿಂದ ವಿನಾಯಿತಿ ನೀಡಿ ಆದೇಶ ಮಾಡಲಾಗಿತ್ತು.
ಕೃಷಿಕರು ವಿವಿಧ ಸಮಸ್ಯೆಯಿಂದ ಬೆಳೆಯನ್ನು ಪಡೆಯಲಾಗದ ಸ್ಥಿತಿಯಿದೆ. ಇಂತಹ ಸಂದರ್ಭ ರೈತರ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ಧಮನಕಾರಿ ನೀತಿ ಅನುಸರಿಸುತ್ತಿದೆ. ಕಾನೂನಿನ ಹೆಸರಿನಲ್ಲಿ ಅಽಕಾರಿ ವರ್ಗದಿಂದ ಜನರಿಗೆ ಮೋಸ ಮಾಡಲಾಗುತ್ತಿದೆ. ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವವರೆಗೆ ಕೋವಿ ಪರವಾನಗಿ ಹೊಂದಿದವರು ಹೆಚ್ಚುವರಿ ಮುದ್ರಾಂಕ ಶುಲ್ಕ ಪಾವತಿ ಮಾಡಬಾರದು.
| ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾದ್ಯಕ್ಷ, ರೈತ ಸಂಘ ಹಸಿರು ಸೇನೆ