ಜಿಲ್ಲೆ

ಗುಂಬಳ್ಳಿ-ಯರಗಂಬಳ್ಳಿ ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲೇ ಚಾಲನೆ

Mysuru - Desk - Ravikumar

ಚಾಮರಾಜನಗರ: ಯಳಂದೂರು ತಾಲೂಕಿನ ಗುಂಬಳ್ಳಿಯಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.


ತಾಲೂಕಿನ ಯರಗಂಬಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಗಳ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಯ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಗ್ರಾಮಕ್ಕೆ 1.40 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಇದರಲ್ಲಿ ಗ್ರಾಮದ ಪರಿಶಿಷ್ಟರು ವಾಸಿಸುವ ಬಹುತೇಕ ಎಲ್ಲ ರಸ್ತೆ, ಚರಂಡಿ ಅಭಿವೃದ್ಧಿಯೂ ಪೂರ್ಣಗೊಳ್ಳಲಿದೆ. ಇದರೊಂದಿಗೆ ಕಳೆದ ಹಲವು ವರ್ಷಗಳಿಂದಲೂ ಗುಂಬಳ್ಳಿ-ಯರಗಂಬಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿ ಗಮನಕ್ಕೆ ಈ ವಿಷಯವನ್ನು ತಂದಿದ್ದೆ. ಇದಕ್ಕೆ ಈಗಾಗಲೇ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ವತಿಯಿಂದ 75 ಲಕ್ಷ ರೂ. ವೆಚ್ಚ ತಗುಲುತ್ತದೆ ಎಂದು ಅಂದಾಜು ಪಟ್ಟಿ ನೀಡಲಾಗಿತ್ತು. ಇದಕ್ಕೆ ಹಣ ಮಂಜೂರಾಗಿರುವ ಬಗ್ಗೆ ಇದೀಗ ಮಾಹಿತಿ ದೊರಕಿದ್ದು, ಆದಷ್ಟು ಬೇಗ ಈ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ. ಇಲ್ಲಿಂದ ಬೇರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಚಾರವೂ ಸುಗಮವಾಗಲಿದೆ ಎಂದರು.


ಭೂಮಿಪೂಜೆ ನೆರವೇರಿಸಿದ ನಂತರ ಸಮೀಪದ ಮಸಣಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಆರೋಗ್ಯ ಉಪಕೇಂದ್ರದ ಘಟಕಗಳನ್ನು ಶಾಸಕರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕವನ್ನು ಈ ಗ್ರಾಮದಲ್ಲಿ ಸ್ಥಾಪಿಸಬೇಕೆಂದು ಬಹುಕಾಲದ ಬೇಡಿಕೆಯಾಗಿತ್ತು. ಇದೀಗ ಇದು ಈಡೇರಿದೆ. ಅಲ್ಲದೆ ಆರೋಗ್ಯ ಉಪಕೇಂದ್ರದಿಂದ ಸ್ಥಳೀಯರಿಗೆ ತಕ್ಷಣಕ್ಕೆ ಬೇಕಾಗುವ ಅಗತ್ಯ ಚಿಕಿತ್ಸೆಗಳು ಲಭಿಸಲಿದ್ದು, ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ ರೇವಣ್ಣ, ಉಪಾಧ್ಯಕ್ಷೆ ಶಾಂತಮ್ಮ, ಲೀಲಾವತಿ, ಸದಸ್ಯರಾದ ಮಹೇಶ್, ಸಿದ್ದರಾಜು, ಮಲ್ಲಿಕಾರ್ಜುನ, ಸೋಮಣ್ಣ, ಡಿ.ಸಿ.ಬಾಬು, ನಾಗರಾಜು, ಶೋಭಾ ನಿರ್ಮಿತಿ ಕೇಂದ್ರದ ಜೆಇ ನಂದೀಶ್, ಪಿಡಿಒ ವೀಣಾ ಡಾ. ಶ್ರೀನಿವಾಸ್, ಆರೋಗ್ಯಾಧಿಕಾರಿ ಮಮತಾ, ಪರಶಿವಮೂರ್ತಿ, ಕಂದಹಳ್ಳಿ ನಂಜುಂಡಸ್ವಾಮಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.