ಯಳಂದೂರು: ಶಾಲಾ ಪ್ರವಾಸದಲ್ಲಿ ತಾಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ. ವೀರಭದ್ರಸ್ವಾಮಿ ಬಸ್ ಚಾಲನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಆದೇಶ ತಡೆ ಹಾಗೂ ನೌಕರನ ಮನವಿ ಮೇರೆಗೆ ತಾತ್ಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಲು ಕರ್ನಾಟಕ ಆಡಳಿತ ನ್ಯಾಯಮಂಡಳಿ ಅನುಮತಿ ನೀಡಿ ಆದೇಶಿಸಿದೆ.
ಆದೇಶದಂತೆ ಶಿಕ್ಷಕ ಎಂ.ವೀರಭದ್ರಸ್ವಾಮಿ ಶನಿವಾರ ಕರ್ತವ್ಯಕ್ಕೆ ಹಾಜರಾಗಿ ಶಾಲೆಯಲ್ಲಿ ಕೆಲಸ ನಿರ್ವಹಿಸಿದರು. ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೀರಭದ್ರಸ್ವಾಮಿ ಅವರು 2024-25 ನೇ ಸಾಲಿನಲ್ಲಿ ಮಕ್ಕಳ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದಾಗ ಕೆಲ ಸಮಯ ಬಸ್ ಚಾಲನೆ ಮಾಡಿದ್ದರು.
ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ವಿಚಾರಣೆ ನಡೆಸಿದಾಗ, ಬಸ್ ಚಾಲಕನಿಗೆ ಅನಾರೋಗ್ಯ ಕಾಡಿತ್ತು. ಹಾಗಾಗಿ ಬಸ್ ಚಾಲನೆ ಮಾಡಿ ಪಕ್ಕಕ್ಕೆ ನಿಲ್ಲಿಸಬೇಕಿತ್ತು. ಹೀಗಾಗಿ ಬಸ್ ಚಾಲನೆ ಮಾಡಿದೆ ಎಂದು ಶಿಕ್ಷಕ ವೀರಭದ್ರಸ್ವಾಮಿ ಲಿಖಿತ ಹೇಳಿಕೆ ನೀಡಿದ್ದರು. ಆದರೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಪಡಿಸಿದ್ದರು.
ಅಮಾನತು ಆದೇಶ ವಿರೋಧಿಸಿ ಶಾಲೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದರ ಮೂಲಕ 2 ದಿನ ಶಾಲೆಗೆ ಹಾಜರಾಗಿರಲಿಲ್ಲ.
ಶಿಕ್ಷಕ ವೀರಭದ್ರಸ್ವಾಮಿ ಶಾಲೆಗೆ ಬಾರದಿದ್ದರೆ ನಾವು ಬರುವುದಿಲ್ಲ, ಅವರು ಯಾವುದೇ ತಪ್ಪು ಮಾಡಿಲ್ಲ, ಅವರಿಲ್ಲದಿದ್ದರೆ ನಮ್ಮ ಪ್ರಾಣ ಹೋಗುತ್ತಿತ್ತು. ಬಸ್ ಚಾಲಕ ಅನಾರೋಗ್ಯದಿಂದ ನರಳುತ್ತಿದ್ದ ವೇಳೆ ಶಿಕ್ಷಕ ವೀರಭದ್ರಸ್ವಾಮಿ ಬಸ್ ಚಾಲನೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ವಿದ್ಯಾರ್ಥಿಗಳು ಹೇಳಿದ್ದರು.
ಅಮಾನತು ಆದೇಶ ಪ್ರಶ್ನಿಸಿ ಶಿಕ್ಷಕ ವೀರಭದ್ರಸ್ವಾಮಿ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿಯನ್ನು ನೀಡಿದ್ದು, ಶನಿವಾರ ಕರ್ತವ್ಯಕ್ಕೆ ಹಾಜರಾದರು.
ಈ ಕುರಿತು ಶಿಕ್ಷಕ ವೀರಭದ್ರಸ್ವಾಮಿ ಪ್ರತಿಕ್ರಿಯಿಸಿದ್ದು, ನನಗೆ ನ್ಯಾಯ ದೊರಕಿದೆ. ನನ್ನ ಅಮಾನತಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ತಡೆ ನೀಡಿದೆ. ಇದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಇದರೊಂದಿಗೆ ಇಂಥ ಕಠಿಣ ಸಂದರ್ಭದಲ್ಲಿ ಸಹಕಾರ ನೀಡಿದ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು, ಪಾಲಕರು, ಗುಂಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.