ಜಿಲ್ಲೆ

ಕೊಲ್ಲಿಯಲ್ಲಿ ಲಕ್ಷಾಂತರ ಭಾರತೀಯರಿಗೆ ಉದ್ಯೋಗ ನಷ್ಟ

ಪ್ರಕಾಶ್ ಮಂಜೇಶ್ವರ ಮಂಗಳೂರು

ಕರೊನಾ ಜಾಗತಿಕ ಮಟ್ಟದಲ್ಲಿ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ. ಇನ್ನು ಕೆಲವು ಲಕ್ಷ ಭಾರತೀಯರು ಸದ್ಯದ ವೇತನಕ್ಕಿಂತ ಕಡಿಮೆ ವೇತನಕ್ಕೆ ದುಡಿಯುವ ಅನಿವಾರ್ಯತೆಗೆ ಒಳಗಾಗಲಿದ್ದಾರೆ.

ಕುವೈತ್‌ನಲ್ಲೇ ಸುಮಾರು 2.50 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳಬಹುದು ಎಂದು ಅಲ್ಲಿನ ಅರೆಬಿಕ್ ದೈನಿಕ ಅಲ್- ಕುಬಾಸ್(ಅ್ಝ- ಕಿಚಿ) ಸರ್ಕಾರಿ ಮೂಲ ಉಲ್ಲೇಖಿಸಿ ವರದಿ ಮಾಡಿದೆ.

ಇದು ಸಂಭವಿಸಿದರೆ ಕೊಲ್ಲಿ ರಾಷ್ಟ್ರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ದುಡಿಯುತ್ತಿರುವ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಹತ್ತಿರದ ಕೇರಳದ ಒಟ್ಟು ಲಕ್ಷಾಂತರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಗಾಢವಾದ ಪರಿಣಾಮ ಬೀರುವುದು ಖಚಿತ.

ಕರೊನಾ ಪ್ರಭಾವ ಭಾರತದಲ್ಲಿ ಕಾಣಿಸಿಕೊಂಡಿದ್ದು, ಅರ್ಥಿಕ ವ್ಯವಸ್ಥೆ ಇಳಿಮುಖ ಹಾದಿಯಲ್ಲಿದೆ. ಇದೇ ಹೊತ್ತಿಗೆ ಇದುವರೆಗೆ ಕುಟುಂಬಗಳಿಗೆ ಆಧಾರವಾಗಿದ್ದ ಕೊಲ್ಲಿ ಬಂಧುಗಳು ಉದ್ಯೋಗ ಕಳೆದುಕೊಂಡು ಊರಿಗೆ ವಾಪಸಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು ನಿಶ್ಚಿತ.

ಕುವೈತ್‌ನಲ್ಲಿ ಮುಖ್ಯವಾಗಿ ಕಡಿಮೆ ವೇತನದಲ್ಲಿ ದುಡಿಯುವವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ವಾಹನ ಬಿಡಿ ಭಾಗ ಮಾರಾಟ, ಗ್ಯಾರೇಜ್, ಹೋಂ ಡೆಲಿವರಿ, ಆಹಾರ ತಯಾರಿ, ವಿವಿಧ ಮಾರಾಟ ವಿಭಾಗಳಲ್ಲಿ ದುಡಿಯುವವರು ಕೆಲಸ ಕಳೆದುಕೊಳ್ಳುವವರ ಸಾಲಿನಲ್ಲಿ ಇದ್ದಾರೆ . ಇದು ಎಲ್ಲ ಕೊಲ್ಲಿ ರಾಷ್ಟ್ರಗಳ ಸದ್ಯದ ಪರಿಸ್ಥಿತಿ ಎನ್ನುತ್ತಾರೆ ಅನಿವಾಸಿ ಭಾರತೀಯರೊಬ್ಬರು.

ಈ ನಡುವೆ ಎಲ್ಲ ಭಾರತೀಯರು ಎಪ್ರಿಲ್ 30ರೊಳಗೆ ದೇಶ ಬಿಟ್ಟು ಹೋಗಬೇಕೆಂದು ಬಹುತೇಕ ಕೊಲ್ಲಿ ರಾಷ್ಟ್ರಗಳು ಸೂಚಿಸಿವೆ ಎಂದು ಹರಡುತ್ತಿದ್ದ ಸುದ್ದಿಗಳು ಶುದ್ದ ಸುಳ್ಳು ಎಂದು ಅನಿವಾಸಿ ಭಾರತೀಯರು ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ಭಾರತಕ್ಕೆ ವಾಪಸ್ ಇಲ್ಲ

ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಎಲ್ಲ ಭಾರತೀಯರನ್ನು ಏಪ್ರಿಲ್ 30ರೊಒಳಗೆ ತಮ್ಮ ದೇಶಕ್ಕೆ ಕರೆಸಿಕೊಳ್ಳುವಂತೆ ಯುಎಇ ಭಾರತಕ್ಕೆ ಸೂಚಿಸಿದೆ ಎಂದು ವ್ಯಾಪಕವಾಗಿ ಹರಡುತ್ತಿರುವ ಸುದ್ದಿ ಸುಳ್ಳು. ರಾಯಭಾರಿ ಕಚೇರಿ ಅಧಿಕಾರಿಗಳನ್ನು ನಾವು ಭಾರತೀಯರು ಸಂಪರ್ಕಿಸಿದ್ದು, ಇಂತಹ ಬೆಳವಣಿಗೆಗಳು ಆಗಿಲ್ಲ ಎಂದು ದುಬೈಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಕೇಶ್ ಕಾಮತ್ ತಿಳಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಎಲ್ಲ ಭಾರತೀಯರನ್ನು ಕಳುಹಿಸುವುದು ಕಷ್ಟ. ಯಾಕೆಂದರೆ ಅನೇಕ ಕ್ಷೇತ್ರಗಳಲ್ಲಿ ಅವರು ನಮ್ಮವರನ್ನೇ ಅವಲಂಬಿಸಿದ್ದಾರೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ಆಧಾರರಹಿತ

ಎಲ್ಲ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸುವ ಸುದ್ದಿ ಆಧಾರರಹಿತ. ಈ ಬಗ್ಗೆ ಟ್ವಿಟರ್ ಮಾಹಿತಿಯಲ್ಲಿ ವೆಬ್‌ಸೈಟ್ ಮೂಲವನ್ನು ಉಲ್ಲೇಖಿಸಲಾಗಿತ್ತು. ಆದರೆ ಉಲ್ಲೇಖಿಸಿರುವ ವೆಬ್‌ಸೈಟ್ನಲ್ಲಿ ಆ ಮಾಹಿತಿಯೇ ಇರಲಿಲ್ಲ ಎಂದು ಕುವೈತ್‌ನಲ್ಲಿ ಸಸ್ಯ ವಿಜ್ಞಾನಿಯಾಗಿರುವ, ಮಂಗಳೂರು ಅಂಬ್ಲಮೊಗರು ನಿವಾಸಿ ವಿನೋದ್ ಕುಮಾರ್ ತಿಳಿಸಿದ್ದಾರೆ. ಕುವೈತ್‌ನಲ್ಲಿ ಇಂಜಿನಿಯರ್‌ರಾಗಿರುವ , ಮಂಗಳೂರು ಮೂಲದ ಮೋಹನದಾಸ್ ಕಾಮತ್ ಕೂಡ ಇದೇ ಅಭಿಮತ ವ್ಯಕ್ತಪಡಿಸಿದ್ದಾರೆ.

ಅನಧಿಕೃತವಾಗಿ ವಾಸಿಸುತ್ತಿರುವವರಿಗೆ ಗಡುವು

ಕುವೈತ್ ಸರ್ಕಾರ ಮಾತ್ರ ತನ್ನ ನೆಲದಲ್ಲಿ ವಾಸಿಸುತ್ತಿರುವ ಅನಧಿಕೃತ ವಿದೇಶಿಯರು ಏಪ್ರಿಲ್ 30ರೊಳಗೆ ದೇಶ ಬಿಡುವಂತೆ ಗಡುವು ವಿಧಿಸಿದೆ. ಅನಧಿಕೃತವಾಗಿ ವಾಸಿಸುವುದನ್ನು ಪ್ರತ್ಯೇಕ ಅರ್ಜಿ ಸಲ್ಲಿಸಿ ಘೋಷಿಸಿ, ನಿಗದಿಪಡಿಸಿದ ಅವಧಿಯಲ್ಲಿ ದೇಶ ಬಿಟ್ಟು ತೆರಳಿದರೆ ದಂಡ ಪಾವತಿಸಬೇಕಾಗಿಲ್ಲ. ವಾಸ್ತವ ಮುಚ್ಚಿಟ್ಟು ದೇಶದಲ್ಲಿ ಅನಧಿಕೃತವಾಗಿ ಉಳಿದುಕೊಳ್ಳುವವರು ಕಠಿಣ ಕಾನೂನು ಕ್ರಮ ಎದುರಿಸಬೇಕು ಎಂದು ಸರ್ಕಾರ ಎಚ್ಚರಿಸಿದೆ.