ಗುಳೇದಗುಡ್ಡ: ಹಲವು ವರ್ಷಗಳಿಂದ ಅಧ್ವಾನವಾಗಿರುವ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿಯ ರೈಲ್ವೆ ಸ್ಟೇಷನ್‌ನಿಂದ ಇಂಜನವಾರಿ ವರೆಗಿನ ರಸ್ತೆಯ ಟೆಂಡರ್ ಪ್ರಕ್ರಿಯೆ ಬಗ್ಗೆ ಗುತ್ತಿಗೆದಾರರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದು, ಲೋಕೊಪಯೋಗಿ ಇಲಾಖೆ 35 ಕೋಟಿ ರೂ. ವೆಚ್ಚದಲ್ಲಿ ಹಾಕಿಕೊಂಡಿದ್ದ ರಸ್ತೆ ಕಾಮಗಾರಿಗೆ ತಡೆ ಬಿದ್ದಿದೆ. ಇಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ನರಕಯಾತನೆ ಮುಂದುವರಿದಿದೆ.
ಕೋರ್ಟ್ ಮೊರೆ
ಅಂದುಕೊಂಡಂತೆ ಆಗಿದ್ದರೆ ರಸ್ತೆ ಕಾಮಗಾರಿ ಕಳೆದ ವರ್ಷ ನವೆಂಬರ್‌ನಲ್ಲಿಯೇ ಆರಂಭವಾಗಬೇಕಿತ್ತು. ಆದರೆ, ಆ ಸಮಯದಲ್ಲಿ ಸರ್ಕಾರ ಬದಲಾಗಿದ್ದರಿಂದ ಕೆಲಸ ಅಲ್ಲಿಗೆ ನಿಂತಿತು. ಬಿಜೆಪಿ ಸರ್ಕಾರ ಬಂದ ಮೇಲೆ ಮತ್ತೆ ಕಾರ್ಯರೂಪಕ್ಕೆ ಬಂದಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಿಂದ ತಡವಾಗಿತ್ತು. ಈಗ ಏಜೆನ್ಸಿ ಅಂತಿಮವಾಗಿದೆ. ಆದರೆ, ಬೇರೊಬ್ಬ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆ ಕುರಿತು ಕೋರ್ಟ್ ಮೊರೆ ಹೋಗಿರುವುದರಿಂದ ಮತ್ತೆ ಕಾಮಗಾರಿಗೆ ವಿಘ್ನ ಎದುರಾಗಿದೆ. ಇದರಿಂದ ರಸ್ತೆ ಯಾವಾಗ ನಿರ್ಮಾಣವಾಗುತ್ತದೆಯೋ ಎಂಬ ಚಿಂತೆ ನಾಗರಿಕರಲ್ಲಿ ಮೂಡಿದೆ.
ಮೂಲಗಳ ಪ್ರಕಾರ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿಸಿತ್ತು. ಏಜೆನ್ಸಿಯೂ ಅಂತಿಮವಾಗಿತ್ತು. ೆ.3ರಂದು ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಸಿದ್ಧತೆ ನಡೆದಿತ್ತು. ಆದರೆ, ಗುತ್ತಿಗೆದಾರರೊಬ್ಬರು ಟೆಂಡರ್ ಪ್ರಕ್ರಿಯೆ ಕುರಿತು ಕೋರ್ಟ್ ಮೊರೆ ಹೋಗಿರುವುದರಿಂದ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಹದಗೆಟ್ಟು ಹೋದ ರಸ್ತೆ
ಕಳೆದ ಏಳೆಂಟು ವರ್ಷಗಳಿಂದ ಇಂಜಿನವಾರಿಯಿಂದ ಗುಳೇದಗುಡ್ಡ ರೈಲ್ವೆ ಸ್ಟೇಷನ್‌ಗೆ ಸಂಪರ್ಕ ಕೊಡುವ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹದಗೆಟ್ಟು ಹೋಗಿದ್ದು, ರಸ್ತೆ ಮಧ್ಯದಲ್ಲಿಯೇ ದೊಡ್ಡದೊಡ್ಡ ತಗ್ಗುಗಳು ನಿರ್ಮಾಣವಾಗಿ ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ. ವರ್ಷದಿಂದ ರಸ್ತೆ ಯಾವುದೋ, ತಗ್ಗು ಯಾವುದೋ ಎನ್ನುವಷ್ಟರ ಮಟ್ಟಿಗೆ ರಸ್ತೆ ಹಾಳಾಗಿ ಹೋಗಿದೆ. ಅಲ್ಲದೆ, ನಿತ್ಯ ವಾಹನ ಸವಾರರು ಸೈಡ್ ತೆಗೆದುಕೊಳ್ಳುವಾಗ ಜಗಳವಾಡಿದ ಉದಾಹರಣೆಗಳು ಇವೆ. ನಿತ್ಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
35 ಕೋಟಿ ವೆಚ್ಚದಲ್ಲಿ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಎಲ್ಲವೂ ಬಗೆಹರಿದು ಕಾಮಗಾರಿ ಆರಂಭಗೊಳ್ಳಲಿದೆ.
ಶಿವಾನಂದ ಜಾಡರ, ಎಇಇ ಲೋಕೋಪಯೋಗಿ ಇಲಾಖೆ