ಗುಳೇದಗುಡ್ಡ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಪರಶುರಾಮ ಬೆಂಡಿಗೇರಿ (59) ಕಳೆದ ಜೂನ್ ತಿಂಗಳಲ್ಲಿ ಕರೊನಾ ಜ್ವರದಿಂದ ಮೃತಪಟ್ಟಿದ್ದರು. ಅವರು ಮೃತಪಟ್ಟು ಹಲವಾರು ತಿಂಗಳುಗಳೇ ಕಳೆದಿದ್ದರೂ ಸರ್ಕಾರ ಇದುವರೆಗೂ ಅವರ ಕುಟುಂಬಕ್ಕೆ ಪರಿಹಾರ ಧನ ನೀಡಿಲ್ಲ. ಕುಟುಂಬಕ್ಕೆ ಆಸರೆಯಾಗಿದ್ದ ಮುಖ್ಯಸ್ಥರನ್ನು ಕಳೆದುಕೊಂಡು ಅವರ ಅವಲಂಬಿತರು ಚಿಂತಿತರಾಗುವಂತಾಗಿದೆ.
ಸ್ವಂತ ಮನೆ ಇಲ್ಲದ ಕಾರಣ ಕುಟುಂಬಸ್ಥರು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದು ಸರ್ಕಾರ ನೆರವು ನೀಡಬೇಕಾಗಿದೆ. ಮೃತ ಪರಶುರಾಮ ಬೆಂಡಿಗೇರಿ ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದು ಅವರ ಪೈಕಿ ಓರ್ವ ಪುತ್ರಿಗೆ ವಿವಾಹವಾಗಿದೆ. ಇನ್ನೋರ್ವ ಪುತ್ರಿ ಸುಲೋಚನಾ ಪದವಿ ಶಿಕ್ಷಣ ಪಡೆದಿದ್ದಾರೆ. ಪುತ್ರ ಮಂಜುನಾಥ ಬೆಂಡಿಗೇರಿ ಎಂಸಿಎ ಪದವಿ ಹಾಗೂ ಇನ್ನೋರ್ವ ಪುತ್ರ ಹನುಮಂತ ಬೆಂಡಿಗೇರಿ ಬಿಇ ಮೆಕ್ಯಾನಿಕಲ್ ಪದವಿ ಮುಗಿಸಿದ್ದಾರೆ. ಸರ್ಕಾರ ಇಂದಲ್ಲ ನಾಳೆ ಸಹಾಯ ಮಾಡುತ್ತದೆ ಎಂಬ ಆಶಾ ಭಾವನೆಯಲ್ಲಿಯೇ ಪರಶುರಾಮ ಬೆಂಡಿಗೇರಿ ಅವರ ಮಡದಿ ಕಸ್ತೂರಿಬಾಯಿ ಅವರು ಮಕ್ಕಳಿಗೆ ಸಮಾಧಾನ ಹೇಳುತ್ತ ಬದುಕು ಸಾಗಿಸುತ್ತಿದ್ದಾರೆ. ಆದರೆ ಜನರ ಕಷ್ಟಕ್ಕೆ ಸ್ಪಂದಿಸಿದ ಕರೊನಾ ಸೇನಾನಿ ಕುಟುಂಬಕ್ಕೆ ಸರ್ಕಾರ ಇದುವರೆಗೂ ನೆರವು ನೀಡದಿರುವುದು ವಿಪರ್ಯಾಸ.
ಎರಡು ಬಾರಿ ಅರ್ಜಿ ಸಲ್ಲಿಕೆ
ಕೋವಿಡ್-19 ನಿಂದ ಅಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರದ ಸಹಾಯಕ್ಕಾಗಿ ಜು.17 ಹಾಗೂ ಆಗಸ್ಟ್ 17 ರಂದು ಇದುವರೆಗೂ ಒಟ್ಟು ಎರಡು ಬಾರಿ ದಾಖಲೆ ಕೊಟ್ಟಿದ್ದೇವೆ. ಆದರೆ ಸರ್ಕಾರದಿಂದ ಇವತ್ತಿನವರೆಗೂ ಸಹಾಯ ಧನ ಬಂದಿಲ್ಲ. ಪೆನ್ಶನ್ ಸೌಲಭ್ಯವೂ ಪ್ರಾರಂಭವಾಗಿಲ್ಲ. ಈ ಬಗ್ಗೆ ಕೇಳಿದಾಗ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ನಿಮ್ಮ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದಿದ್ದಾರೆ. ನಮ್ಮ ತಂದೆ ತೀರಿಕೊಂಡ ಬಳಿಕ ನಮಗೆ ತೀವ್ರ ತೊಂದರೆಯಾಗಿದ್ದು ಇದುವರೆಗೂ ಪೆನ್ಶನ್ ಹಣ ಬಂದಿಲ್ಲ. ಇದ್ದ ಹಣ ಹಾಗೂ ಸಂಬಂಧಿಕರ ಹತ್ತಿರ ಪಡೆದ ಹಣದಿಂದ ಇಲ್ಲಿಯವರೆಗೆ ಜೀವನ ನಡೆಸಿದ್ದೇವೆ. ಸರ್ಕಾರ ಶೀಘ್ರ ಪರಿಹಾರ ಧನ ನೀಡಬೇಕು. ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅವರ ಮಕ್ಕಳು ಒತ್ತಾಯಿಸಿದ್ದಾರೆ.
ಕರೊನಾ ಸೋಂಕು ತೀವ್ರಗತಿಯಲ್ಲಿದ್ದಾಗ ನಮ್ಮ ತಂದೆ ಸತತ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಅವರು ನಮಗೆ ಶಕ್ತಿಯಾಗಿದ್ದರು. ಈಗ ಅವರಿಲ್ಲದ್ದರಿಂದ ನಮಗೆ ಮುಂದೇ ಏನು ಮಾಡಬೇಕು ಎನ್ನುವುದು ತೋಚದಂತಾಗಿದೆ. ಸರ್ಕಾರ ನಮಗೆ ನೆರವು ನೀಡಿದರೆ ಜೀವನಕ್ಕೆ ದಾರಿಯಾಗುತ್ತದೆ.
ಸರೋಜಾ, ಮಂಜುನಾಥ, ಹನುಮಂತ, ಸುಲೋಚನಾ
ಮೃತ ಕರೊನಾ ಸೇನಾನಿ ಪರಶುರಾಮ ಬೆಂಡಿಗೇರಿ ಅವರ ಮಕ್ಕಳು