ಮಂಗಳೂರು: ಕೆರೆಯ ಸುತ್ತ ವಿಸ್ತಾರವಾದ ಆವರಣ ಗೋಡೆ, ಸ್ಟೀಲ್ ರೇಲಿಂಗ್, ುಟ್‌ಪಾತ್, ಜಾಗಿಂಗ್ ಟ್ರ್ಯಾಕ್, ವ್ಯಾಯಾಮಕ್ಕೆ ಜಿಮ್ ಪರಿಕರಗಳು, ಸೈಕ್ಲಿಂಗ್ ಟ್ರ್ಯಾಕ್, ರಸ್ತೆ, ಮಳೆ ನೀರು ಹರಿಯಲು ಪ್ರತ್ಯೇಕ ಚರಂಡಿ, ಟೇಬಲ್, ಕುಳಿತುಕೊಳ್ಳುವ ಆಸನ, ವಿದ್ಯುತ್ ದೀಪ, ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಜಾಗ... ಇದು ಗುಜ್ಜರಕೆರೆ ಪರಿಸರದ ಪ್ರಸ್ತುತ ಸೌಲಭ್ಯ.
ವರ್ಷದ ಹಿಂದಿನ ತನಕ ನಡೆದಾಡಲು ಕಷ್ಟಪಡುತ್ತಿದ್ದ ಪುರಾತನ ಗುಜ್ಜರಕೆರೆ ಪರಿಸರಕ್ಕೆ ಹೊಸ ಕಳೆ ಬಂದಿದೆ. ಸಾಯಂಕಾಲ ಅಡ್ಡಾಡಲು, ವಿಶ್ರಾಂತಿ ಪಡೆಯಲು ಇಲ್ಲಿಗೆ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಸ್ಮಾರ್ಟ್‌ಸಿಟಿ ವಿಶೇಷ ಯೋಜನೆಯಲ್ಲಿ ಸುಮಾರು 3.70 ಕೋಟಿ ರೂ. ವೆಚ್ಚದಲ್ಲಿ ಕೆರೆಯ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಮುಂದಿನ ವಾರ ಉದ್ಘಾಟನೆ ನಡೆಸಲು ಅಧಿಕಾರಿ ವರ್ಗ ಸಿದ್ದತೆ ನಡೆಸಿದೆ.
ಗುಜ್ಜರಕೆರೆ ಅಭಿವೃದ್ಧಿಯಾಗಬೇಕು ಎಂಬುವುದು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆ. 20 ವರ್ಷಗಳಲ್ಲಿ ಈ ಕೆರೆ ಕಾಮಗಾರಿಗೆಂದು ಸುಮಾರು 6 ಕೋಟಿ ರೂ.ಗೂ ಅಧಿಕ ಹಣ ಇಲ್ಲಿ ವೆಚ್ಚವಾಗಿದೆ. ಕೊನೆಗೂ ಕೆರೆ ಹಾಗೂ ದಡ ಪರಿಸರದ ಸುಂದರೀಕರಣ ಯಶಸ್ವಿಯಾಗಿ ನಡೆದಿದೆ.
ನೀರಿನ ಶುದ್ಧತೆ ಬಗ್ಗೆ ಅನುಮಾನ: ಆದರೆ ತೀರ್ಥ ಕೆರೆಯೆಂದೇ ಪ್ರಸಿದ್ದಿ ಪಡೆದಿರುವ ಗುಜ್ಜರ ಕೆರೆಯ ನೀರು ಇನ್ನೂ ಕುಡಿಯಲು ಯೋಗ್ಯವಾಗಿದೆಯೇ ಎನ್ನುವ ಬಗ್ಗೆ ಅನುಮಾನವಿದೆ. ಕೆರೆಯ ನೀರಿಗೆ ಆಸುಪಾಸಿನ ಡ್ರೈನೇಜ್ ನೀರು ಮಿಶ್ರಣವಾಗುತ್ತಿರುವುದು ಕೆರೆ ನೀರು ಮಲಿನವಾಗಲು ಮುಖ್ಯ ಕಾರಣ. ಈ ಸಮಸ್ಯೆ ಬಗೆಹರಿದರೆ ಈ ಕೆರೆ ಇಡೀ ಮಂಗಳೂರಿನ ಜನತೆಗೆ ದೊಡ್ಡ ಆಸ್ತಿಯಾಗಲಿದೆ ಎನ್ನುವುದು ಈ ಕೆರೆಯ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವವರ ವಿಶ್ವಾಸ.
ಗುಜ್ಜರಕೆರೆ ಅಭಿವೃದ್ಧಿಯಿಂದ ಸಂತೋಷವಾಗಿದೆ. 2001ರಿಂದ ಕೆರೆ ಅಭಿವೃದ್ದಿಗಾಗಿ ವಿವಿಧ ಸರ್ಕಾರ, ಜನಪ್ರತಿನಿಧಿಗಳು ಪ್ರಯತ್ನಿಸುತ್ತಾ ಬಂದಿದ್ದಾರೆ. ಈಗ ಒಂದು ಒಳ್ಳೆಯ ಹಂತಕ್ಕೆ ಕೆರೆ ಅಭಿವೃದ್ಧಿ ಕಂಡಿದೆ. ಕೆರೆಯ ನೀರು ಕುಡಿಯಲು ಯೋಗ್ಯವಾಗುವಷ್ಟು ಶುದ್ಧೀಕರಣ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು. ಮುಂದಿನ ದಿನಗಳಲ್ಲಿ ಅದು ಕೂಡ ಸಾಧ್ಯವಾಗಬಹುದು.
ನೇಮು ಕೊಟ್ಟಾರಿ, ಪ್ರ.ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ
ನವೀಕೃತ ಗುಜ್ಜರ ಕೆರೆ ಉದ್ಘಾಟನೆಯನ್ನು ನಿಸರ್ಗದ ಜತೆಗೆ ಬೆಳಕಿನ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ವಿಭಿನ್ನ ರೀತಿಯಲ್ಲಿ ಒಂದು ಸಾಯಂಕಾಲ ನಡೆಸಲು ಉದ್ದೇಶಿಸಲಾಗಿದೆ. ದಿನ ನಿಗದಿಯಾಗಿಲ್ಲ. ಕೆರೆಯ ನೀರಿಗೆ ಡ್ರೈನೇಜ್ ಸಂಪರ್ಕ ಇಲ್ಲ. ಆದರೆ ಕೆರೆಯಲ್ಲಿ ಪರಿಪೂರ್ಣ ಶುದ್ಧ ನೀರು ದೊರೆಯಲು ಸಾಧ್ಯವಾಗುವಂತೆ ಹೊಸ ಯೋಜನೆಯನ್ನು ಸ್ಮಾರ್ಟ್ ಸಿಟಿಯಲ್ಲಿ ಸೇರಿಸಲಾಗಿದೆ.
* ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು