ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಪ್ರಸಕ್ತ ಋತುವಿನಲ್ಲಿ ರಣಜಿ ಪಂದ್ಯಾವಳಿ ಆಯೋಜನೆಗೆ ಅವಕಾಶ ಸಿಗಲಿದೆಯೇ ಎಂಬ ಕುತೂಹಲ ಕ್ರಿಕೆಟ್ಪ್ರಿಯರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಇನ್ನೊಂದು ತಿಂಗಳಲ್ಲಿ ಉತ್ತರ ಸಿಗಲಿದೆ.
ರಣಜಿ ಪಂದ್ಯಾವಳಿಗೆ ಸಂಬಂಧಿಸಿ ಬಿಸಿಸಿಐ ಹಾಗೂ ಕೆಎಸ್ಸಿಎ ಇನ್ನೂ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ರಣಜಿ ಟ್ರೋಫಿ ವೇಳಾಪಟ್ಟಿಯೂ ಬಿಡುಗಡೆಯಾಗಿಲ್ಲ. ಒಂದು ವೇಳೆ ಈ ಋತುವಿನಲ್ಲಿ ರಣಜಿ ಪಂದ್ಯಗಳು ನಡೆದರೆ ಶಿವಮೊಗ್ಗಕ್ಕೆ ಸತತ ನಾಲ್ಕನೇ ವರ್ಷವೂ ಕ್ರೀಡೆಯ ರಸದೌತಣ ಸಿಗಲಿದೆ.
ಸುಸಜ್ಜಿತ ಕ್ರೀಡಾಂಗಣ: ಕಟ್ಟುನಿಟ್ಟಿನ ಕರೊನಾ ಮಾರ್ಗಸೂಚಿ ಇದ್ದರೂ ಅದಕ್ಕೆ ಸೂಕ್ತ ವ್ಯವಸ್ಥೆ ಶಿವಮೊಗ್ಗ ಕೆಎಸ್ಸಿಎ ಕ್ರೀಡಾಂಗಣದಲ್ಲಿದೆ. ನವುಲೆಯ 25 ಎಕರೆ ವಿಸ್ತೀರ್ಣದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಈಗಾಗಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಿರಿಯರ ಟೂರ್ನಿ ನಡೆಸಲಾಗಿದೆ. ಕ್ರೀಡಾಂಗಣದಲ್ಲಿ ಈವರೆಗೆ ಸತತ ಮೂರು ವರ್ಷ ಮೂರು ರಣಜಿ ಪಂದ್ಯಗಳು ನಡೆದಿವೆ. ಬೆಂಗಳೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಅತ್ಯಂತ ವ್ಯವಸ್ಥಿತ ಕ್ರೀಡಾಂಗಣವಿದೆ. ನೆಲ ಅಂತಸ್ತಿನಲ್ಲಿ ಸಭೆ ನಡೆಸಲು ಸಭಾಂಗಣ, ಬಲ ಮತ್ತು ಎಡಭಾಗದಲ್ಲಿ ವಿಶಾಲ ಡ್ರೆಸಿಂಗ್ ರೂಮ್ಳಿವೆ.
ಮೊದಲ ಮಹಡಿಯಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಮಲ್ಟಿ ಜಿಮ್ ಮ್ಯಾಚ್ ರೆಫ್ರಿ, ಅಂಪೈರ್ಗಳಿಗೆ ಕೊಠಡಿ, ಆಡಳಿತ ಕಚೇರಿ, ವಿಡಿಯೋ ಅನಾಲಿಸ್ಟ್, ವೀಕ್ಷಕ ವಿವರಣೆಗಾರರಿಗೆ ಪ್ರತ್ಯೇಕ ಕೊಠಡಿಗಳಿವೆ.
ವಾಸ್ತವ್ಯಕ್ಕೆ ಅವಕಾಶ: ಶಿವಮೊಗ್ಗದಲ್ಲಿ ಸುಸಜ್ಜಿತ ಐಷಾರಾಮಿ ಹೋಟೆಲ್ಗಳು ಇರುವುದರಿಂದ ಕರೊನಾ ಮಾರ್ಗಸೂಚಿ ಅನ್ವಯ ರಣಜಿ ಪಂದ್ಯ ನಡೆಸಲು ಯಾವುದೇ ಸಮಸ್ಯೆ ಇಲ್ಲ. ಎರಡು ಕ್ರೀಡಾಂಗಣ ಇರುವುದರಿಂದ ಸತತವಾಗಿ ಪಂದ್ಯಾವಳಿ ಆಯೋಜಿಸಬಹುದು. ಇದರಿಂದ ಆಟಗಾರರ ಪ್ರಯಾಣವನ್ನೂ ತಪ್ಪಿಸಿದಂತಾಗುತ್ತದೆ.