ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹುಬ್ಬಳ್ಳಿ ಗ್ರಾಮೀಣ ವತಿಯಿಂದ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳಾ ವಿಚಾರಗೋಷ್ಠಿಯನ್ನು ಇತ್ತೀಚೆಗೆ ಇಲ್ಲಿಯ ಲಿಂಗರಾಜ ನಗರದ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರಮಿಸುತ್ತಿದ್ದಾರೆ. ಕಾನೂನು, ಸ್ವ ಉದ್ಯೋಗ, ಪೌಷ್ಟಿಕ ಆಹಾರ, ಉಚಿತ ಆರೋಗ್ಯ ಶಿಬಿರ, ವಾತ್ಸಲ್ಯ ಕಾರ್ಯಕ್ರಮ, ನಿರ್ಗತಿಕರಿಗೆ ಮಾಸಾಶನ ಸೇರಿ ಹಲವಾರು ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನಿಡುತ್ತಿದ್ದಾರೆ ಎಂದರು.
ಸಿರಿಧಾನ್ಯ ವಿಭಾಗದ ಹಿರಿಯ ನಿರ್ದೇಶಕ ದಿನೇಶ ಎಂ. ಅವರು ಹೊಸ ಕಾರ್ಯಕ್ರಮಗಳ ಅನುಷ್ಠಾನ, ಸಿರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಶಂಕರ ಬೆಳ್ಳುಬ್ಬಿ ಅವರು ಸಂಸ್ಕೃತಿ, ಸಂಸ್ಕಾರದಲ್ಲಿ ಪೋಷಕರ ಪಾತ್ರದ ಬಗ್ಗೆ ವಿವರಿಸಿದರು.
ಪಾಲಿಕೆ ಸದಸ್ಯ ಉಮೇಶ ಕೌಜಗೇರಿ, ತಾಲೂಕು ಯೋಜನಾಧಿಕಾರಿ ಸೋಮಲಿಂಗ ಕೆ., ಅಧ್ಯಕ್ಷೆ ಸಪ್ನಾ ಹಿರೇಮಠ, ಜಿಲ್ಲಾ ಜನಜಾಗೃತಿ ಸದಸ್ಯ ಮಾರುತಿ ಶೇಟ್ ಇತರರು ಇದ್ದರು.