ಜಿಲ್ಲೆ

ಜಗಳೂರಲ್ಲಿ ಪರಹಾರ ಮೊತ್ತ ನೀಡುವಂತೆ ಆಗ್ರಹ

ಜಗಳೂರು: ಎನ್​ಎಸ್​ಎಲ್ ವಿಂಡ್ ಪವರ್ ಕಂಪನಿಯು 33 ಕೆವಿ ವಿದ್ಯುತ್ ಕಂಬಗಳು ಹಾದು ಹೋಗಿರುವ ಜಮೀನುಗಳಿಗೆ ಪರಿಹಾರ ನೀಡದೆ ಮೋಸ ಮಾಡಿದೆ ಎಂದು ಆಪಾದಿಸಿ ಸೋಮವಾರ ತಾಲೂಕಿನ ಗುಹೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.

ವಿದ್ಯುತ್ ಕಂಬಗಳು ಹಾದು ಹೋಗಿರುವ ಲೈನ್ ಮಾರ್ಗಗಳ ಗ್ರಾಮಗಳಾದ ಅರಿಶಿಣಗುಂಡಿ, ತೋರಣಗಟ್ಟೆ, ಲಿಂಗಣ್ಣನಹಳ್ಳಿ ಮತ್ತು ಕಟ್ಟಿಗೆಹಳ್ಳಿ ಗ್ರಾಮಗಳ ರೈತರು ಬೆಟ್ಟಕ್ಕೆ ಹೋಗುವ ರಸ್ತೆ ಬಂದ್ ಮಾಡಿ ಕಂಪನಿ ವಿರುದ್ಧ ಘೊಷಣೆ ಕೂಗಿದರು.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ತಾಲೂಕಿನ ತೋರಣಗಟ್ಟೆ ಮತ್ತು ಕಟ್ಟಿಗೆಹಳ್ಳಿ ಮಧ್ಯೆ ಇರುವ ಗುಹೇಶ್ವರ ಬೆಟ್ಟದಲ್ಲಿ 23 ವರ್ಷಗಳ ಹಿಂದೆ ಅಳವಡಿಸಲಾಗಿರುವ ವಿಂಡ್​ಗಳಿಂದ ಉತ್ಪಾದನೆಯಾಗುವ ವಿದ್ಯುತ್​ನ್ನು ರೈತರ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಅಲ್ಲಿಂದ ಬೇರೆಡೆಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಜಮೀನುಗಳಲ್ಲಿರುವ ಕಂಬಗಳಿಗೆ ಪರಿಹಾರ ನೀಡದೇ ಅಲೆದಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅರಿಶಿಣಗುಂಡಿ ಗ್ರಾಮದ ನಾಗರಾಜ್ ಮಾತನಾಡಿ, ನಮ್ಮ ಜಮೀನಿನಲ್ಲಿ ಹೈವೋಲ್ಟೇಜ್ ವಿದ್ಯುತ್ ಕಂಬಗಳನ್ನು ಬೇಕಾಬಿಟ್ಟಿ ಜಮೀನಿನ ಮಧ್ಯ ಭಾಗದಲ್ಲೇ ಅಳವಡಿಸಲಾಗಿದೆ. ಇಂಗ್ಲಿಷ್​ನಲ್ಲಿ ತಮಗೆ ಬೇಕಾದ ನಿಯಮಗಳನ್ನು ಬರೆದುಕೊಂಡು ಓದು ಬಾರದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಈಗಾಗಲೇ ಕಂಪನಿಯ ವಾಯ್ದೆ 25 ವರ್ಷಗಳು ಮುಕ್ತಾಯವಾಗುತ್ತಿದ್ದು, ನಮ್ಮ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ಅಡಿಯಲ್ಲಿ ಅಡಕೆ ಮರಗಳು ಬೆಳೆದು ನಿಂತಿವೆ. ಮಳೆ ಬಂದರೆ ತೋಟಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಡಕೆ ಮರದ ಮುಖೇನ ವಿದ್ಯುತ್ ಭೂಮಿಗೆ ಪ್ರವಹಿಸುತ್ತಿದೆ. ಕೂಡಲೇ ವಿದ್ಯುತ್ ಕಂಬಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.

ಲಿಂಗಣ್ಣನಹಳ್ಳಿ ಗ್ರಾಮದ ರೈತ ಮುಖಂಡ ಜೆ.ಎನ್. ವೀರೇಶ್ ಮಾತನಾಡಿ, ಎನ್​ಎಸ್​ಎಲ್ ವಿಂಡ್ ಪವರ್ ಕಂಪನಿಯಿಂದ ಪರಿಹಾರ ಮೊತ್ತ ಕೇಳಿದರೆ ಅವರು ಕೋರ್ಟ್​ಗೆ ಹಾಕಿ ರೈತರನ್ನು ಅಲೆದಾಡಿಸುತ್ತಿದ್ದಾರೆ. ಕಂಪನಿಯ ವಿರುದ್ಧ ಹೋರಾಟ ಆರಂಭಿಸಿದ್ದೇವೆ. ಪರಿಹಾರ ಮೊತ್ತ ಕೊಡದೇ ಇದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್​ಐ ಗಾದಿಲಿಂಗಪ್ಪ ಅವರು ಕಂಪನಿಯ ವಿಭಾಗೀಯ ಅಧಿಕಾರಿ ಶಿವಧನ್ ಪಿಳ್ಳೈ ಜತೆ ದೂರವಾಣಿಯಲ್ಲಿ ಮಾತನಾಡಿ 2-3 ದಿನಗಳಲ್ಲಿ ರೈತರ ಸಮಸ್ಯೆ ಬಗೆ ಹರಿಸಿ ಎಂದು ಸೂಚಿಸಿದಾಗ, ಅದಕ್ಕೆ ಶಿವಧನ್ ಪಿಳ್ಳೈ, ನಮ್ಮ ಕಂಪನಿ ವಕೀಲರ ಜತೆ ಮಾತನಾಡಿ ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಚಿತ್ತಪ್ಪ, ಜಗದೀಶ್, ಪಿ.ಟಿ. ನಾಗರಾಜ್, ತಿಮ್ಮಣ್ಣ, ಅರಿಶಿಣಗುಂಡಿ ರಾಜು, ಮಲ್ಲಿಕಾರ್ಜುನ್, ಸಿದ್ದೇಶ್ ಸೇರಿ ಅನೇಕ ರೈತರು ಇದ್ದರು.