ಜಿಲ್ಲೆ

ಶಿಗ್ಗಾಂವಿ ತಾಲೂಕಿನ ಅತಿಥಿ ಶಿಕ್ಷಕರಿಗಿಲ್ಲ ‘ಗೌರವ ಧನ’

ಬಂಕಾಪುರ: ಶೈಕ್ಷಣಿಕ ವರ್ಷ ಅರ್ಧ ಕಳೆದರೂ ಗೌರವ ಧನ ಬಿಡುಗಡೆ ಆಗದ ಕಾರಣ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರು ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.

ಶಿಗ್ಗಾಂವಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ 55 ಮತ್ತು ಪ್ರಾಥಮಿಕ ಶಾಲೆಗಳಲ್ಲಿ 180 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ದಿನಕ್ಕೆ 350 ರೂ.ನಂತೆ 30 ದಿನಗಳ ಹಾಜರಾತಿಗೆ 10,500 ರೂಪಾಯಿ ಮತ್ತು ಪ್ರಾಥಮಿಕ ಶಾಲೆ ಶಿಕ್ಷಕರಿಗೆ 10 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ.

ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರ ಗೌರವಧನ ಸೆಪ್ಟೆಂಬರ್​ವರೆಗೆ ಪಾವತಿಸಿರುವ ಇಲಾಖೆ, ಪ್ರೌಢಶಾಲೆಯಲ್ಲಿ ಪಾಠ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ಜೂನ್​ನಿಂದ ಈವರೆಗಿನ 6 ತಿಂಗಳ ಗೌರವಧನ ಇನ್ನೂ ಪಾವತಿಸಿಲ್ಲ. 25 ಪ್ರೌಢಶಾಲೆಗಳ ಪೈಕಿ ನೂತನವಾಗಿ ಆರಂಭಗೊಂಡಿರುವ ಹಳೇಬಂಕಾಪುರ, ಬೆಳವಲಕೊಪ್ಪ, ಮುಗಳಿ, ಹನುಮನಹಳ್ಳಿ, ಹಿರೇಮಲ್ಲೂರ ಸೇರಿ ಐದು ಪ್ರೌಢಶಾಲೆಗಳಲ್ಲಿ ಇದುವರೆಗೂ ಮುಖ್ಯ ಶಿಕ್ಷಕರ ನೇಮಕಾತಿ ಆಗದ ಕಾರಣ ಅಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವೇತನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪಾವತಿಸಲಾಗುತ್ತದೆ.

ಸರ್ಕಾರ ನಿಗದಿಪಡಿಸಿರುವ ಗೌರವಧನ ಶಿಕ್ಷಕರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ವಿಶೇಷ ಅಧಿಕಾರಿಗಳು (ಜಿಪಂ) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ(ಆರ್ಥಿಕ ಇಲಾಖೆ)ಗಳ ಕಚೇರಿಯಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮೂಲಕ ತಾಲೂಕು ಪಂಚಾಯತಿಗೆ ಗೌರವಧನ ವರ್ಗಾವಣೆಯಾಗುತ್ತದೆ. ತಾಪಂನಿಂದ ಶಿಕ್ಷಣ ಇಲಾಖೆಗೆ ಬಂದ ಹಣವನ್ನು ಪ್ರತಿ ತಿಂಗಳು ಶಿಕ್ಷಕರ ಹಾಜರಾತಿಗೆ ಅನುಗುಣವಾಗಿ ಗೌರವಧನ ಪಾವತಿಸಬೇಕು. ಶಿಕ್ಷಣ ಇಲಾಖೆ ಖಾತೆಗೆ ಹಣ ಬಂದಿದ್ದರೂ ಅದರ ವಿಲೇವಾರಿಗೆ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಚುನಾವಣೆ, ತಾಪಂ ಅಧಿಕಾರಿಯ ಗೈರು ಸೇರಿದಂತೆ ಹತ್ತು ಹಲವು ಕಾರಣಗಳನ್ನು ಶಿಕ್ಷಣ ಇಲಾಖೆ ನೀಡುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ. ಅಧಿಕಾರಗಳ ಅಸಡ್ಡೆಯಿಂದ ಅರೆಕಾಸಿಗೆ ದುಡಿಯುವ ಅತಿಥಿ ಶಿಕ್ಷಕರು ತಮ್ಮ ಕುಟುಂಬ ನಿರ್ವಹಣೆಗೆ ಸಂಕಷ್ಟಪಡುವಂತಾಗಿದೆ.

ಜೂನ್​ನಿಂದ ಆಗಸ್ಟ್​ವರೆಗಿನ ಮೂರು ತಿಂಗಳ ವೇತನ ನೀಡಲು ಸಂಬಂಧಪಟ್ಟ ಇಲಾಖೆಗಳು ತೆಗೆದುಕೊಂಡ ಅವಧಿ ನಾಲ್ಕು ತಿಂಗಳು. ಕೆಲವರಿಗೆ ಏಳು ತಿಂಗಳಾದರೂ ಇನ್ನೂ ಗೌರವಧನ ನೀಡಿಲ್ಲ. ಸರ್ಕಾರ ಸಕಾಲಕ್ಕೆ ವೇತನ ಪಾವತಿಸಿದರೆ ವಾರದೊಳಗೆ ಹಣ ನೀಡುತ್ತೇವೆ ಎನ್ನುವ ಇಲಾಖೆ ಅಧಿಕಾರಿಗಳು ಬೇರೆ, ಬೇರೆ ಇಲಾಖೆಗಳತ್ತ ಬೊಟ್ಟು ಮಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ.

ಸರ್ಕಾರದಿಂದ ಸಿಗುವ ಗೌರವಧನ ಸಕಾಲಕ್ಕೆ ನೀಡಿದರೆ ಅನುಕೂಲವಾಗುತ್ತದೆ ಎನ್ನುವ ಅತಿಥಿ ಶಿಕ್ಷಕರು, ಇಲಾಖೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಭಯದಲ್ಲಿ ಬಹಿರಂಗವಾಗಿ ತಮ್ಮ ಸಂಕಷ್ಟ ತೋರಿಸಿಕೊಳ್ಳದೇ ಪರಿಚಯಸ್ಥರ, ಗೆಳೆಯರ ಹತ್ತಿರ ಕೈಗಡ ಸಾಲ ಪಡೆದು ಸೇವೆ ಸಲ್ಲಿಸುವಂತಾಗಿದೆ.

ಕೆಲ ಅತಿಥಿ ಶಿಕ್ಷಕರ ವಿಳಾಸ ಬದಲಾವಣೆಯಿಂದ ಗೌರವಧನ ನೀಡುವಲ್ಲಿ ವಿಳಂಬವಾಗಿದೆ. ನಮಗೆ ಆಗಸ್ಟ್​ವರೆಗಿನ ಅನುದಾನ ಅಕ್ಟೋಬರ್​ನಲ್ಲಿ ಬಿಡುಗಡೆಯಾಗಿದೆ. ನಂತರ ಶಿಕ್ಷಕರ ಮಾಹಿತಿ ಪಡೆದುಕೊಳ್ಳುವ ಮತ್ತು ಉಪಚುನಾವಣೆ ಕೆಲಸಗಳಿಂದ ವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ ಬಾಕಿ ಇರುವ ಗೌರವಧನ ಎಲ್ಲ ಶಿಕ್ಷಕರ ಖಾತೆಗೆ ವರ್ಗಾವಣೆ ಮಾಡಲಾಗುವುದು. ಆಗಸ್ಟ್​ನಂತರದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. | ಎಂ.ಬಿ. ಅಂಬಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿಗ್ಗಾಂವಿ