ಹಾಸನ: ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ 2025-26 ನೇ ಸಾಲಿನ
ಬಿಕ್ಕಟ್ಟು ನಿವಾರಣೆಗಾಗಿ ಸರ್ಕಾರದ ಹಂತದಲ್ಲೇ ಯುಜಿಸಿ, ನಾನ್ ಯುಜಿಸಿ ಎಂಬ ತಾರತಮ್ಯ ಮಾಡದೇ ಕ್ಯಾಬಿನೆಟ್ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಧಿಕಾರಿ ಲತಾ ಕುಮಾರಿ ಕೆ.ಎಸ್.ಅವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಡಿಸಿ ಕಚೇರಿ ಎದುರು ಧರಣಿ ನಡೆಸಿದ ಉಪನ್ಯಾಸಕರು, ಸರ್ಕಾರ ಮನಸ್ಸು ಮಾಡಿದ್ರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಯತೀಶ್ ಕಬ್ಬಾಳು, ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸುಮಾರು 11 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 5,623 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರಿದ್ದು, ಉಳಿದ 5,353 ಜನ ನಾನ್-ಯುಜಿಸಿ ಆಗಿದ್ದಾರೆ. ಅಲ್ಲದೆ ಸಾವಿರಾರು ಅತಿಥಿ ಉಪನ್ಯಾಸಕರು ಎಂ.ಫಿಲ್ ಪದವಿ ಪಡೆದವರೂ ಇದ್ದಾರೆ. ಇವರೆಲ್ಲರೂ ಹತ್ತಾರು ವರ್ಷಗಳಿಂದ ಬೋಧನಾ ಅನುಭವ, ಕೌಶಲ ಹೊಂದಿ ಇದುವರೆಗೂ ಗುಣಮಟ್ಟದ ಬೋಧನೆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಿದ್ದೇವೆ ಎಂದರು.
ಲಕ್ಷಾಂತರ ವಿದ್ಯಾರ್ಥಿಗಳು ಅನೇಕ ಉನ್ನತ ಹುದ್ದೆ, ಅವಕಾಶ ಪಡೆದು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕಾಯಂ ಅಧ್ಯಾಪಕರಿಗೆ ನೀಡಿರುವ ಯಾವುದೇ ಸವಲತ್ತುಗಳನ್ನು ಪಡೆಯದೆ ತಾತ್ಕಾಲಿಕ ನೌಕರರಾಗಿಯೇ, ಯುಜಿಸಿ ಶಿಫಾರಸ್ಸು ಮಾಡಿರುವ ವೇತನವೂ ಇಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದರು.
ಈಗಾಗಲೇ ಹೈಕೋರ್ಟ್, ಒಬ್ಬ ತಾತ್ಕಾಲಿಕ ನೌಕರನ ಸ್ಥಾನಕ್ಕೆ ಮತ್ತೊಬ್ಬ ತಾತ್ಕಾಲಿಕ ನೌಕರನನ್ನು ಸ್ಥಳಾಂತರಿಸಲು ಅವಕಾಶ ಇಲ್ಲ ಎಂದು ತೀರ್ಪು ನೀಡಿದೆ. ಇದರ ಆಧಾರದ ಮೇಲೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆರವು ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಜತೆಗೆ ಕಾಲೇಜು ಶಿಕ್ಷಣ ಇಲಾಖೆ ಯಾವುದೇ ಅತಿಥಿ ಉಪನ್ಯಾಸಕರನ್ನು, ನೂತನ ಕಾಯಂ ನೇಮಕಾತಿ ಅಥವಾ ವರ್ಗಾವಣೆ, ನಿಯೋಜನೆ ಸಂದರ್ಭದಲ್ಲಿ ಮತ್ತು ಕಾರ್ಯಭಾರದ ಕೊರತೆ ಆದಾಗ ಮಾತ್ರ ಅತಿಥಿ ಉಪನ್ಯಾಸಕರ ಸ್ಥಾನ ತೆರವು ಗೊಳಿಸಬಹುದು ಎಂದು ಪ್ರತಿ ನೇಮಕಾತಿ ಸುತ್ತೋಲೆಗಳಲ್ಲಿ ಪ್ರಸ್ತಾಪ ಮಾಡಿದೆ.
ರಾಜ್ಯದ ಶೇ.70ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆ ಅವಲಂಭಿಸಿವೆ. ಕಳೆದೊಂದು ತಿಂಗಳಿಂದ ಸರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯುತ್ತಿಲ್ಲ. ಜತೆಗೆ ಇದೇ ವೃತ್ತಿಯನ್ನು ನಂಬಿ ದಶಕಗಳಿಂದ ಪಾಠ ಪ್ರವಚನ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಈಗ ಅತಂತ್ರವಾಗಿದೆ. ಕಳೆದ ಒಂದೂವರೆ ತಿಂಗಳಿಂದ ಗೌರವಧನವೂ ಇಲ್ಲದೆ ನಮ್ಮ ಬದುಕು ಮತ್ತು ನಮ್ಮನ್ನೇ ನಂಬಿರುವ ಕುಟುಂಬಗಳ ಸ್ಥಿತಿಯು ಹೇಳ ತೀರದಾಗಿದೆ ಎಂದು ಅಳಲು ತೋಡಿಕೊಂಡರು.
ನಮ್ಮನ್ನು ಉಳಿಸಿಕೊಳ್ಳಬೇಕು ಎಂದು ಸಿಎಂ, ಡಿಸಿಎಂ ಹಾಗೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು. ಪ್ರತಿಭಟನಾ ಧರಣಿಯಲ್ಲಿ ಅತಿಥಿ ಉಪನ್ಯಾಸಕರಾದ ಸಂತೋಷ್ ಅರಕಲಗೂಡು, ಮಂಜುನಾಥ್, ಮಹೇಶ್, ಪುಟ್ಟಸ್ವಾಮಿ, ಸುಧಾ, ಹರಿಣಾಕ್ಷಿ, ಮಾನಸ, ಶೃತಿ, ಸುಧಾರಾಣಿ, ಯತೀಶ್, ಲತಾ, ಆಯಿಷಾ, ಪದ್ಮಾಗೌಡ, ಶ್ರೀನಿವಾಸ್ ಇತರರು ಇದ್ದರು.