ಜಿಲ್ಲೆ

ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ ಸಂಬಳ ಬಿಡುಗಡೆ

djtrupti

ಬೆಂಗಳೂರು : ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ ಗೌರವಧನವನ್ನು ಪಾವತಿಸಲು ಕಾಲೇಜು ಶಿಕ್ಷಣ ಇಲಾಖೆ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ. ಮಾರ್ಚ್ ನಿಂದ ಆಗಸ್ಟ್‌ವರೆಗೆ ವಿಶೇಷ ಪ್ರಕರಣದಡಿಯಲ್ಲಿ ಕರ್ತವ್ಯದ ಅವಧಿ ಎಂದು ಪರಿಗಣಿಸಿ ಗೌರವಧನವನ್ನು ಪಾವತಿಸಲು ಅನುಮತಿ ನೀಡಿ ಇಲಾಖೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಲೀಡ್ ಕಾಲೇಜು ಪ್ರಾಂಶುಪಾಲರಿಗೆ 2020 ಮಾರ್ಚ್‌ನಲ್ಲಿದ್ದಂತೆ ಪ್ರತಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರ ಸಂಖ್ಯೆ, ಮಾರ್ಚ್ ಮಾಹೆಗೆ ಸದರಿ ಅತಿಥಿ ಉಪನ್ಯಾಸಕರಿಗೆ ಪಾವತಿಸಬೇಕಾಗಿದ್ದ ಗೌರವಧನದ ಮೊತ್ತ, ಕೇಂದ್ರ ಕಚೇರಿಯಿಂದ ಬಿಡುಗಡೆ ಮಾಡಿರುವ ಅನುದಾನದಲ್ಲಿ ಪಾವತಿಸಬೇಕಾಗಿರುವ ಗೌರವಧನದ ಮೊತ್ತ ವಿವರವನ್ನು ಇಲಾಖೆಗೆ ಸಲ್ಲಿಸಬೇಕು. ಅಲ್ಲದೆ, ಎಲ್ಲ ಸರ್ಕಾರಿ ಪ್ರಥಮ ದರ್ಜೆ ಪ್ರಾಂಶುಪಾಲರುಗಳು ಮಾರ್ಚ್ 2020ರ ಮಾಹೆಯ ಅತಿಥಿ ಉಪನ್ಯಾಸಕರ ಗೌರವಧನ ಮಾಹಿತಿ ಇಎಂಐಎಸ್‌ನ ಹಾಜರಾತಿ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ದೃಢೀಕರಿಸಿ ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗೆ ಇ-ಮೇಲ್ ಮಾಡಬೇಕು ಎಂದು ಇಲಾಖೆ ನಿರ್ದೇಶಕರು ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ಅತಿಥಿ ಉಪನ್ಯಾಸಕರ ಸಂಘ ಲಾಕ್‌ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಗೌರವಧನ ನೀಡಬೇಕೆಂದು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಈ ಆದೇಶವನ್ನು ನೀಡಿದೆ.