ಜಿಲ್ಲೆ

ಬೋಂಡ-ಬಜ್ಜಿ ಮಾರಿ ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ವಿವಿಧ ಕಾರ್ಮಿಕ ಸಂಘಟನೆ ಮುಖಂಡರು ಸಾಥ್ ನೀಡಿದರು. ಪ್ರತಿಭಟನಾ ಸ್ಥಳದಲ್ಲೇ ಅತಿಥಿ ಉಪನ್ಯಾಸಕರು ಬೋಂಡಾ-ಬಜ್ಜಿ ಮಾರಾಟ ಮಾಡಿ ವಿನೂತನ ರೀತಿಯಲ್ಲಿ ಸರ್ಕಾರದ ಗಮನಸೆಳೆದರು.

ಪ್ರತಿಭಟನೆಯ 7ನೇ ದಿನವಾದ ಬುಧವಾರ ಕಾರ್ಮಿಕ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಅತಿಥಿ ಉಪನ್ಯಾಸಕರಿಗೆ ಸಾಥ್ ನೀಡಿದರು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀದ್, ಅತಿಥಿ ಉಪನ್ಯಾಸಕರ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಹೋರಾಟ ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಲು ನೀವೆಲ್ಲ ಸಿದ್ಧರಾಗಬೇಕು. ಉಪನ್ಯಾಸಕರುಗಳಾದ ನೀವು ಈ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ನಿಲ್ಲಿಸಬಾರದು ಎಂದರು.

ಅತಿಥಿ ಉಪನ್ಯಾಸಕರು ವಿಭಿನ್ನವಾಗಿ ಹೋರಾಟಗಳನ್ನು ಮಾಡುತ್ತಿದ್ದೀರಿ. ಆದರೆ, ಹೋರಾಟ ಸೌಮ್ಯ ಸ್ವಭಾವದಲ್ಲಿದ್ದು ಈ ರೀತಿ ಹೋರಾಟ ಮಾಡಿದರೆ ಯಾವ ಸರ್ಕಾರಗಳು ಕಿವಿಗೊಡುವುದಿಲ್ಲ. ಹೋರಾಟದ ಸ್ವರೂಪವನ್ನು ತೀವ್ರಗೊಳಿಸಿದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಉಪನ್ಯಾಸಕರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಿ: ಹೋರಾಟಗಳು ತೀವ್ರ ಸ್ವರೂಪದಲ್ಲಿದ್ದಾಗ ಮಾತ್ರ ನ್ಯಾಯ ದೊರೆಯುತ್ತದೆ. ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರ ಹೋರಾಟಗಳನ್ನು ಮನಗಂಡು ಹೋರಾಟದ ದಿಕ್ಕು ಬದಲಿಸಿ. ವಿಧಾನಸೌಧ ಮುತ್ತಿಗೆ, ಮಂತ್ರಿಗಳ ಮನೆಗಳ ಮುತ್ತಿಗೆ ಹಾಕುವುದರ ಮೂಲಕ ಹೋರಾಟ ಬಿಸಿ ತಟ್ಟುವಂತೆ ತೀವ್ರಗೊಳಿಸಿದಲ್ಲಿ ಮಾತ್ರ ನ್ಯಾಯ ಸಿಗಲಿದೆ. ಇಲ್ಲವಾದಲ್ಲಿ ಸರ್ಕಾರ ನಿಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ತಿಳಿಸಿದರು.

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ವಿವಿಧ ಸಂಘಟನೆಗಳ ಮುಖಂಡರ ಬೆಂಬಲ ದೊರೆತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು. ಸರ್ಕಾರ ಇನ್ನಾದರೂ ನಮ್ಮ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟದ ರೂಪವನ್ನು ಬದಲಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಸಿದ್ದಲಿಂಗು, ಗಿರೀಶ್, ಎರ‌್ರಿಸ್ವಾಮಿ, ಹರ್ಷಿತ, ಶಂಕರ್ ಹಾರೋಗೆರೆ ,ಸವಿತಾ, ಮಹೇಶ್, ಕಾಂತರಾಜು ಸೇರಿದಂತೆ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.