ಜಿಲ್ಲೆ

ಸೇವೆಯಿಂದ ಕೈಬಿಡದಂತೆ ಆಗ್ರಹ: ನಗರದಲ್ಲಿ ಅತಿಥಿ ಉಪನ್ಯಾಸಕರ ಮನವಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡದಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮನವಿ ಸ್ವೀಕರಿಸಿದರು.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತಾರೂ ವರ್ಷದಿಂದ ಗೌರವ ಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. 2024-25ನೇ ಸಾಲಿನಲ್ಲಿ 10,976 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಯುಜಿಸಿ 2018ರ ಮಾರ್ಗಸೂಚಿ ಅನ್ವಯ 2024-25ನೇ ಸಾಲಿಗೆ ಸಂಬಂಧಿಸಿದಂತೆ ಹೊಸದಾಗಿ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ 1500ಕ್ಕೂ ಹೆಚ್ಚು ಉಪನ್ಯಾಸಕರು ಸೇವೆಯಿಂದ ಹೊರಗುಳಿಯುವಂತಾಗಿದೆ. ಮಾತ್ರವಲ್ಲದೆ ಇವರನ್ನೇ ನಂಬಿರುವ ಕುಟುಂಬ ಬೀದಿಗೆ ಬೀಳುವಂತಾಗಿದೆ. ಇನ್ನೊಂದೆಡೆ ಬಹುತೇಕರು ಯಾವುದೇ ನೌಕರರಿಗೆ ಅರ್ಜಿ ಹಾಕಲು ವಯೋಮಿತಿ ಕೂಡ ಮೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಬೇಕಿದೆ. ಇದಲ್ಲದೆ ಕೆಲ ಅಂಶದ ಆಧಾರದಲ್ಲಿ ನೋಡುವುದಾದರೆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡುವುದು ನಿಯಮಬಾಹಿರವು ಆಗಲಿದೆ. ಆದ್ದರಿಂದ ಯುಜಿಸಿ 2018ರ ತಾತ್ಕಾಲಿಕ ಆಯ್ಕೆ ಪ್ರಕ್ರಿಯೆಯ ನಿಯಮಾವಳಿಯನ್ನು ಸರ್ಕಾರ ಮರು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಸ್.ನಾಗರಾಜು, ಚೇತನ್‌ಕುಮಾರ್, ಬೋರಯ್ಯ, ರಂಹನ್, ರಘು, ನಂದೀಶ್, ಜಯಂತ್ ಇತರರಿದ್ದರು.