ಮಂಡ್ಯ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸಬೇಕೆಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಸಾವಿರಾರು ಅತಿಥಿ ಉಪನ್ಯಾಸಕರು ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಿಂದ ಹಾಗೂ ಪ್ರಸಕ್ತ ಸಾಲಿನಲ್ಲಿ ಕಾರ್ಯಭಾರದ ಕೊರತೆಯಿಂದಾಗಿ ತಾವು ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಹುದ್ದೆಯಿಂದ ಈ ಬಾರಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ದಿನ ನೂಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಅತಿಥಿ ಉಪನ್ಯಾಸಕರ ಸೇವಾ ವಿಲೀನ ಸಂಬಂಧ 2021ರ ಆ. 23ರಂದು ವಿಧಾನ ಪರಿಷತ್ ಸಭಾಪತಿ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಧಾರ ಮತ್ತು 2021ರ ಅ.1ರಂದು ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕೈಗೊಂಡ ಸಭಾ ನಡವಳಿಕೆ ಮತ್ತು 2021ರ ಸೆ. 5ರಂದು ಕಾಲೇಜು ಶಿಕ್ಷಣ ಇಲಾಖೆ ಆಡಳಿತಾಧಿಕಾರಿಗಳು ಚರ್ಚಿಸಿದ ನಡಾವಳಿಗಳನ್ನು ಸಂಪುಟ ಸಮಿತಿಯ ಮುಂದೆ ಮಂಡಿಸಿ ಇತ್ಯರ್ಥಪಡಿಸಬೇಕು. ಕರ್ನಾಟಕ ನಾಗರೀಕ ಸೇವಾ ನಿಯಮ 1977 ನಿಯಮ 14ರ ಅಡಿ ಮತ್ತು ಕರ್ನಾಟಕ ಸಿವಿಲ್ ಸರ್ವಿಸ್ ಆ್ಯಕ್ಟ್ 1978ರ ಅಡಿ ಸೇವೆಯಲ್ಲಿ ವಿಲೀನಗೊಳಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಪ್ರತಿ ತರಗತಿಯನ್ನು 40-60ರ ಅನುಪಾತದಲ್ಲಿ ವಿಭಜಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಬಿ.ಎಸ್.ನಾಗರಾಜು, ಮುಖಂಡರಾದ ವಿನೋದ್, ಶಿಲ್ಪಾ, ಮಧುರ, ಸಾಗರ್, ಯೋಗಿತಾ, ಹರ್ಷಿತಾ, ಉಮೇಶ್, ಸುಪ್ರೀತಾ, ಪವನ್, ವೀರಪ್ಪ ಇತರರಿದ್ದರು.