ಜಿಲ್ಲೆ

ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ ಮಂಗಳೂರು ವಿವಿಯ ಸಿಂಡಿಕೇಟಿನ ಮಾಜಿ ಸದಸ್ಯ ರಮೇಶ ಕೆ. ಆಗ್ರಹ

ಹರೀಶ ಎಂ.

ಮಂಗಳೂರು: ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸುವಂತೆ ಮಂಗಳೂರು ವಿವಿಯ ಸಿಂಡಿಕೇಟಿನ ಮಾಜಿ ಸದಸ್ಯ ರಮೇಶ ಕೆ. ಸರ್ಕಾರವನ್ನು ಆಗ್ರಹಿಸಿದ್ದಾರೆ.


ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆ ಆದ್ದರಿಂದ ಶಿಕ್ಷಕರು ಪ್ರಜ್ಞಾನವಂತ ಮತ್ತು ಮೌಲ್ಯಾಧಾರಿತ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ನಮ್ಮ ರಾಜ್ಯದಲ್ಲಿ ಕಳೆದ ಅನೇಕ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರವು ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸುತ್ತಿಲ್ಲವೆಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಯುಜಿಸಿಯು 537ನೇ ಸಭೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುವ ಕಾಲೇಜಿಗೆ 7ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ಪ್ರತಿ ಪಾಠಕ್ಕೆ 1500 ಅಥವಾ ತಿಂಗಳಿಗೆ ಗರಿಷ್ಠ 50,000ರೂ ಗೌರವಧನವನ್ನು ನಿಗದಿ ಪಡಿಸುವಂತೆ ಆದೇಶಿಸಿದೆ. ಸರ್ಕಾರವು ಯುಜಿಸಿಯ ಸುತ್ತೋಲೆಯನ್ನು ಪಾಲನೆ ಮಾಡುವುದರ ಮೂಲಕ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸುವಂತೆ ಕಾನೂನಿನಲ್ಲಿ ಬದಲಾವಣೆಯನ್ನು ತರಬೇಕೆಂದು ಅವರು ಒತ್ತಾಯಿಸಿದ್ದಾರೆ.