ಜಿಲ್ಲೆ

ಅಡಕತ್ತರಿಯಲ್ಲಿ ಅತಿಥಿ- ಸಹಾಯಕ ಉಪನ್ಯಾಸಕರು

Haveri - Desk - Ganapati Bhat

ಮಂಜುನಾಥ ಎಸ್. ಅಂಗಡಿ ಧಾರವಾಡ

ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕರ ನೇಮಕಾತಿಯಂತೂ ಗಗನಕುಸುಮವಾಗಿದೆ. ಬಹುತೇಕ ವಿಭಾಗಗಳು ಅತಿಥಿ-ಸಹಾಯಕ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಕನಿಷ್ಠ ವೇತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ- ಸಹಾಯಕ ಉಪನ್ಯಾಸಕರನ್ನು ಉನ್ನತ ಶಿಕ್ಷಣ ಇಲಾಖೆ ಮನವಿಯನ್ನು ಉಲ್ಲಂಘಿಸಿ ಸಂದರ್ಶನದ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಸಂಲಗ್ನ ಮಹಾವಿದ್ಯಾಲಯಗಳಲ್ಲಿ ಅತಿಥಿ- ಸಹಾಯಕ ಉಪನ್ಯಾಸಕರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವೇತನ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿವರ್ಷ ಬೀದಿಗಿಳಿದು ಹೋರಾಟ ನಡೆಯುತ್ತಲೇ ಇದೆ. ಪರಿಣಾಮ ವೃತ್ತಿಪರ ಕೋರ್ಸ್​ಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ 19,000 ರೂಪಾಯಿ, ಬೋಧನಾ ಸಹಾಯಕರಿಗೆ 32,000 ರೂ. ವೇತನ ನಿಗದಿಯಾಗಿದೆ. ಅದೇರೀತಿ ವೃತ್ತಿಪರ ಅಲ್ಲದ ಕೋರ್ಸ್​ಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ 17,000 ರೂಪಾಯಿ ಮತ್ತು ಬೋಧನಾ ಸಹಾಯಕರಿಗೆ 30,000 ರೂ. ವೇತನ ಇದೆ.

ವಿಶ್ವವಿದ್ಯಾಲಯದ ಸಂಲಗ್ನತೆಯ ಕರ್ನಾಟಕ ಕಾಲೇಜಿನಲ್ಲಿ 2024- 25ನೇ ಸಾಲಿಗಾಗಿ ಅತಿಥಿ ಉಪನ್ಯಾಸಕರು ಹಾಗೂ ಬೋಧನಾ ಸಹಾಯಕರ ನೇಮಕಕ್ಕೆ ಅ. 18ರಿಂದ ಸಂದರ್ಶನ ನಡೆಯುತ್ತಿದೆ. ಆ. 28ರಿಂದಲೇ ಪ್ರಸಕ್ತ ವರ್ಷದ ಸ್ನಾತಕ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿವೆ. ಸೆ. 3ರಿಂದ ಸ್ನಾತಕ ತರಗತಿಗಳು ಆರಂಭವಾಗಿದೆ. ಒಂದು ವರ್ಷದ ಅವಧಿಗೆ ಅತಿಥಿ ಉಪನ್ಯಾಸಕರು ಹಾಗೂ ಬೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಲು ಆಗಸ್ಟ್​ನಲ್ಲೇ ಅರ್ಜಿ ಆಹ್ವಾನಿಸಲಾಗಿದೆ. ಆದಾಗ್ಯೂ ಈಗ ಸಂದರ್ಶನ ನಡೆಯುತ್ತಿದ್ದು, ಇನ್ನೂ 4- 5 ದಿನ ಮುಂದುವರಿಯಲಿದೆ. ಒಂದೆಡೆ ಸಂದರ್ಶನ, ಮತ್ತೊಂದೆಡೆ ಕಳೆದ ವರ್ಷ ಕಾರ್ಯನಿರ್ವಹಿಸುತ್ತಿದ್ದವರಿಗೇ ತಾತ್ಕಾಲಿಕ ಆದೇಶ ಪತ್ರ ನೀಡಲಾಗಿದೆ.

ಯಥಾಸ್ಥಿತಿ ಮುಂದುವರಿಸಲು ಮೀನಮೇಷ:

ವಿಶ್ವವಿದ್ಯಾಲಯ ಹಾಗೂ ಸಂಲಗ್ನ ಕಾಲೇಜುಗಳಲ್ಲಿ 2023- 24ರಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಪ್ರಸಕ್ತ ವರ್ಷಕ್ಕೂ ಮುಂದವರಿಸುವುದನ್ನು ಪರಿಶೀಲಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ. ಈ ಸಂಬಂಧ ಇಲಾಖೆಯ ಅಧೀನ ಕಾರ್ಯದರ್ಶಿ ಅ. 18ರಂದು ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಮೊದಲು ಇದ್ದವರ ಸೇವೆಯನ್ನು ಒಂದು ದಿನದ ಮಟ್ಟಿಗೆ ಮೊಟಕುಗೊಳಿಸಿ ಯಥಾಸ್ಥಿತಿ ಮುಂದುವರಿಸುವಂತೆ ಕೋರಿದ್ದು, ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ. ಆದರೆ, ಇಲ್ಲಿ ಸರ್ಕಾರದ ಮನವಿಯನ್ನು ಲೆಕ್ಕಿಸದೇ ಸಂದರ್ಶನ ಏರ್ಪಡಿಸಲಾಗಿದೆ.

ಸಿಂಡಿಕೇಟ್ ನಿರ್ಣಯ ಗೊಂದಲ:

ಸಂದರ್ಶನ ರದ್ದುಪಡಿಸಿ ಮೊದಲಿದ್ದವರನ್ನೇ ಮುಂದುವರಿಸಬೇಕು ಎಂಬ ಬೇಡಿಕೆ ಅತಿಥಿ- ಸಹಾಯಕ ಉಪನ್ಯಾಸಕರದು. ಈ ಕುರಿತು 2019ರಲ್ಲಿ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅತಿಥಿ ಉಪನ್ಯಾಸಕರಾಗಿ 3 ವರ್ಷ ಸೇವೆ ಸಲ್ಲಿಸಿದವರಿಗೆ ಸಂದರ್ಶನದಿಂದ ವಿನಾಯಿತಿ ನೀಡಬೇಕು ಎಂದು ಸಭೆ ನಿರ್ಣಯಿಸಿತ್ತು. ಆದರೆ, 2022ರಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಎಂದು ನಿರ್ಣಯಿಸಲಾಗಿದೆ.

ಅನಗತ್ಯ ಮಾನಸಿಕ ಹಿಂಸೆ

ಪ್ರತಿವರ್ಷ ನಡೆಯುವ ಸಂದರ್ಶನ ಅನಗತ್ಯ ಮಾನಸಿಕ ಹಿಂಸೆಯಾಗಿದೆ. ಒಂದೆಡೆ ತಾತ್ಕಾಲಿಕ ಆದೇಶ ಪತ್ರ ನೀಡಿದ್ದರಿಂದ ಪಾಠ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಪ್ರತಿವರ್ಷ ಸಂದರ್ಶನಕ್ಕೂ ಹಾಜರಾಗಬೇಕಿದೆ. ಪಾಠ ಮಾಡುವುದು, ಆಂತರಿಕ ಪರೀಕ್ಷೆ ನಡೆಸುವುದು ಜತೆಗೆ ಸಂದರ್ಶನಕ್ಕೆ ಹಾಜರಾಗುವ ಅತಂತ್ರ ಸ್ಥಿತಿ ನಿರ್ವಣವಾಗಿದೆ.

ಪಿಯುಸಿ ಫಲಿತಾಂಶ ವಿಳಂಬ ಮತ್ತು ನ್ಯಾಕ್ ಸಮಿತಿ ಆಗಮನದಿಂದಾಗಿ ಸಂದರ್ಶನ ನಡೆಸುವುದು ವಿಳಂಬವಾಗಿದೆ. 2022ರ ಸಿಂಡಿಕೇಟ್ ಸಭೆಯ ನಿರ್ಣಯದ ಅನುಸಾರ ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯ ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲಾಗಿದೆ. | ಡಾ. ಎ. ಚನ್ನಪ್ಪ, ಕವಿವಿ ಕುಲಸಚಿವ