ಶ್ರೀ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ಮುಖ್ಯ ರಸ್ತೆ ದುಸ್ಥಿತಿ. 
ಜಿಲ್ಲೆ

ದುಸ್ಥಿತಿಯಲ್ಲಿ ಗೂಡುಗದ್ದೆ-ಗುಹ್ಯ ರಸ್ತೆ

ಮಾದೇಶ್ ತಿ.ನರಸೀಪುರ

 ಸಿದ್ದಾಪುರ: ಪೌರಾಣಿಕ ಹಿನ್ನೆಲೆ ಹೊಂದಿರುವ ಶ್ರೀ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ಮುಖ್ಯರಸ್ತೆ ಗುಂಡಿಮಯವಾಗಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು 2ವಾರ್ಡ್ ಗೂಡುಗದ್ದೆ, ಗುಹ್ಯ ಕಕ್ಕಟುಕಾಡು, ಗ್ರಾಮದ ಸಂಪರ್ಕ ರಸ್ತೆಗಳು ದುರಸ್ತಿ ಕಾಣದೆ ಗುಂಡಿಮಯವಾಗಿದ್ದು 600ಕ್ಕೂ ಅಧಿಕ ಕುಟುಂಬಗಳ ಸದಸ್ಯರು ಸಂಕಷ್ಟದಲ್ಲಿ ಸಂಚರಿಸುತ್ತಿದ್ದಾರೆ. ಗೂಡುಗದ್ದೆಯಿಂದ ನೆಲ್ಯಹುದಿಕೇರಿ ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ.

ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. 15 ವರ್ಷಗಳ ಹಿಂದೆ ಕಾವೇರಿ ನದಿಗೆ ನೂತನ ಸೇತುವೆ ನಿರ್ಮಾಣ ಸಂದರ್ಭ ವಿಸ್ತರಣೆ ಸಂದರ್ಭ ದುರಸ್ತಿಪಡಿಸಿದ ನಂತರ ಇಲ್ಲಿ ಯಾವುದೇ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿತ್ಯ ನೂರಾರು ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಈ ರಸ್ತೆಯಲ್ಲೇ ಸಂಕಷ್ಟದಿಂದ ಸಂಚರಿಸುತ್ತಿದ್ದು, ಖಾಸಗಿ ಅಥವಾ ಬಾಡಿಗೆ ವಾಹನಗಳನ್ನೇ ಅವಲಂಬಿಸಬೇಕಿದೆ. ಹದಗೆಟ್ಟ ರಸ್ತೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಬಾಡಿಗೆ ವಾಹನಗಳು ಬರಲು ಹಿಂಜರಿಯುತ್ತಿದ್ದಾರೆ. ದುಪ್ಪಟ್ಟು ಬಾಡಿಗೆ ಕೇಳುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಥಳೀಯರು.

ರಸ್ತೆಗೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆಯಲ್ಲೇ ಹರಿಯುವುದರಿಂದ ಅಲ್ಲಿಲ್ಲಿ ಹೊಂಡಗಳು ನಿರ್ಮಾಣವಾಗಿ ಕೆರೆಯಂತಾಗಿದೆ. ರಸ್ತೆ ಬೀದಿಗಳಲ್ಲಿ ಗಿಡಗಂಟಿಗಳು ಬೆಳೆದು ರಸ್ತೆ ಕಿರಿದಾಗಿದ್ದು ವಾಹನಗಳು ಎದುರಾದರೆ ಜಾಗ ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಕೂಲಿ ಕಾರ್ಮಿಕರೆ ವಾಸಿಸುವ ಇಲ್ಲಿ ಪ್ರತಿಯೊಂದು ಕೆಲಸಕ್ಕೂ ಸಿದ್ದಾಪುರ, ನೆಲ್ಯಹುದಿಕೇರಿಯನ್ನೇ ಅವಲಂಬಿಸಿದ್ದಾರೆ. ಇದರಿಂದ ಹದಗೆಟ್ಟ ರಸ್ತೆಯಲ್ಲೇ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಫಿತೋಟದ ಬದಿಯಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ವನ್ಯಜೀವಿಗಳ ಉಪಟಳ ಇದ್ದು ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರಾತ್ರಿ ಹೊತ್ತು ಭಯದಲ್ಲೇ ಸಂಚರಿಸಬೇಕಾಗಿದ್ದು ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರಿಂದ ಮನವಿ ಬಂದಿದ್ದು, ಈಗಾಗಲೇ ಕ್ರಿಯಾಯೊಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಪ್ರೇಮಾ ಗೋಪಾಲ್ ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಸಿದ್ದಾಪುರ ಗ್ರಾಮೀಣ ರಸ್ತೆಯಾಗಿರುವುದರಿಂದ ಬಸ್ ಸಂಚಾರ ಇಲ್ಲ. ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಬಾಡಿಗೆ ವಾಹನವನ್ನೇ ಅವಲಂಬಿಸಿದ್ದು, ರಸ್ತೆ ಅವ್ಯವಸ್ಥೆಯಿಂದ ಬಾಡಿಗೆ ವಾಹನ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ದುಬಾರಿ ಬಾಡಿಗೆ ನೀಡಿ ಹೋಗ ಬೇಕಾಗಿದೆ. ಅನೀಶ್ ನಿವಾಸಿ, ಗೂಡುಗದ್ದೆ