ಬೂದುಬಾಳು ವೆಂಕಟರಮಣ ಸ್ವಾಮಿ ಉತ್ಸವ ನಡೆಯಿತು. 
ಜಿಲ್ಲೆ

ಬೂದುಬಾಳಿನಲ್ಲಿ ಗುಡಿಹಟ್ಟಿ ವೆಂಕಟರಮಣಸ್ವಾಮಿ ಉತ್ಸವ

ಹನೂರು : ಸಮೀಪದ ಬೂದುಬಾಳು ಗ್ರಾಮದ ಪ್ರಸಿದ್ಧ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಹಾಗೂ ಸಿರಗೋಡಿನ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಕಡೇ ಶ್ರಾವಣ ಮಾಸದ ಶನಿವಾರದ ಅಂಗವಾಗಿ ವಿಶೇಷ ಪೂಜೆ ಜರುಗಿದ್ದು, ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಬೂದುಬಾಳು ಗ್ರಾಮದ ವೆಂಕಟರಮಣಸ್ವಾಮಿ ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ಸ್ವಾಮಿಗೆ ವಿವಿಧ ಅಭಿಷೇಕ, ಸಹಸ್ರನಾಮ ಹಾಗೂ ವಿಶೇಷ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಆಗಮಿಸಿದ ಭಕ್ತರು ಧೂಪ ಹಾಕಿ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಹರಕೆಹೊತ್ತ ಭಕ್ತರು ಮುಡಿಸೇವೆ ನೀಡುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.

ಚಾಮರಾಜನಗರ, ಮಂಡ್ಯ ಸೇರಿದಂತೆ ಈ ಭಾಗದ ಮಾರ್ಟಳ್ಳಿ, ಎಲ್ಲೇಮಾಳ, ಕುರಟ್ಟಿಹೊಸೂರು, ದಿನ್ನಳ್ಳಿ, ದಂಟಳ್ಳಿ, ಹನೂರು, ಕೊಳ್ಳೇಗಾಲ, ಕಾಮಗೆರೆ, ಮಂಗಲ, ಕಣ್ಣೂರು, ಅಚಗಳ್ಳಿದೊಡ್ಡಿ, ಅಜ್ಜೀಪುರ, ರಾಮಾಪುರ, ಬಂಡಳ್ಳಿ, ಸಿಂಗಾನಲ್ಲೂರು ಹಾಗೂ ಇನ್ನಿತರ ಕಡೆಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಸಿರಗೋಡಿನಲ್ಲಿ ಉತ್ಸವ ಮೂರ್ತಿ ಮೆರವಣಿಗೆ: ಸಿರಗೋಡಿನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಕಡೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಸ್ವಾಮಿಗೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರ ಸಮ್ಮುಖದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೆರವಣಿಗೆ ನಡೆಸಲಾಯಿತು. ಈ ವೇಳೆ ವಾದ್ಯಮೇಳ ಹಾಗೂ ಜಾಗಟೆಗಳ ಸದ್ದು ಜೋರಾಗಿತ್ತು. ಭಕ್ತರು ಗೋವಿಂದಾ… ಗೋವಿಂದಾ ಜಯಘೋಷಗಳನ್ನು ಮೊಳಗಿಸಿದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು. ತಾಲೂಕಿನ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು.