ವಿಜಯಪುರ: ಬಸವಾದಿ ಶರಣರ ಸಮಕಾಲೀನದಲ್ಲಿದ್ದ ಮಹಾ ಶರಣೆ ದಾನಮ್ಮ ವಚನ ಸಾಹಿತ್ಯದ ರಕ್ಷಣೆಗೆಂದೇ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದು ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉಮರ್ ಶರೀಫ ಕುಂಟೋಜಿ ಅಭಿಪ್ರಾಯಪಟ್ಟರು.
ನಗರದ ಬಂಜಾರಾ ಕ್ರಾಸ್ ಬಳಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 17ನೇ ಮಾಸಿಕ ಶಿವಾನುಭವದಲ್ಲಿ ‘ಶರಣೆ ಗುಡ್ಡಾಪುರ ದಾನಮ್ಮ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಹನ್ನೆರಡು ವರ್ಷಗಳ ಕಾಲ ತಿರುಗಾಡಿ ಜ್ಞಾನ, ವಚನ, ಸಾಹಿತ್ಯವನ್ನು ಸಂಪಾದಿಸಿ ಶರಣ ಸಂಸ್ಕೃತಿಯನ್ನು ಎತ್ತಿ ಹಿಡಿದವರು. ಮೌಢ್ಯತೆಗೆ ತಿಲಾಂಜಲಿ ನೀಡಿದವರು. ಲೌಕಿಕ ವಸ್ತುಗಳನ್ಯಾವುದನ್ನೂ ಬಯಸದೆ ಬಂದ ಎಲ್ಲವನ್ನೂ ಇಟ್ಟುಕೊಳ್ಳದೆ ದಾನವಾಗಿ ನೀಡುವುದರ ಮೂಲಕ ಲಿಂಗಮ್ಮಳಾಗಿದ್ದ ಆಕೆ ‘ಮಹಾದಾನಿ ಗುಡ್ಡಾಪುರ ದಾನಮ್ಮ’ ಎಂದೆನಿಸಿಕೊಂಡದ್ದು ಇತಿಹಾಸ. ಇವತ್ತಿಗೂ ನಾಡಿನ ಆಸ್ತಿಕರ, ಭಕ್ತರ ಮನದಾಳದಲ್ಲಿ ಅಚ್ಚಳಿಯದಂತಹ ಭಕ್ತಿ ಸಿಂಹಾಸನದಲ್ಲಿ ವಿರಾಜಮಾನಳಾಗಿರುವುದು ಈ ಭಾಗದ ಹೆಮ್ಮೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಗಂಗಾಧರ ತೆಗ್ಗೆಳ್ಳಿ ಮಾತನಾಡಿ, ವೈಚಾರಿಕ, ಆಧ್ಯಾತ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ವಿಚಾರಗಳ ಕಡೆಗೆ ಮನಸ್ಸು ವಾಲಿದರೆ ನಮ್ಮ ದೈನಂದಿನ ಜೀವನದಲ್ಲಿ ನಗು, ಸಂತೋಷ ಹೆಚ್ಚುತ್ತದೆ ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷೆ ಶಶಿಕಲಾ ಸ್ಥಾವರಮಠ, ಮಹಾಸಭಾದ ನಿರ್ದೇಶಕ ಕೆ.ಬಿ.ಅಣೆಪ್ಪನವರ, ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ, ಮಹಾದೇವ ಹಾಲಳ್ಳಿ, ಡಾ.ಸೋಮಶೇಖರ ವಾಲಿ, ಸುವರ್ಣಾ ಕುರ್ಲೆ, ಕಮಲಾ ಗೆಜ್ಹಿ, ಭಾರತಿ ಭುಯ್ಯರ, ಎಸ್.ಎಸ್.ಕೋರಿ, ಬಿ.ಎಚ್.ಬಾದರಬಂಡಿ, ಬಿ.ಆರ್.ಬನಸೋಡೆ, ಎಂ.ಎಂ.ಅವರಾದಿ, ಶರಣಗೌಡ ಪಾಟೀಲ ಇನ್ನಿತರರಿದ್ದರು.