ಜಿಲ್ಲೆ

ಓಟಕಜೆಯಲ್ಲಿ ಸೇತುವೆಗೆ ಗುದ್ದಲಿ ಪೂಜೆ : ಶಾಸಕಿಯ ಎದುರು ಬಿಜೆಪಿ-ಕಾಂಗ್ರೆಸ್ ಜಟಾಪಟಿ : ಗಡಿ ಪ್ರದೇಶದ ವಿವಾದ

ಸೌಮ್ಯ ಆರ್

ಕಡಬ: ಸರ್ಕಾರದ ಹೊಸ ಕಾಲು ಸಂಕ ನಿರ್ಮಾಣ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಂಡಿರುವ 60 ಲಕ್ಷ ರೂ. ಅನುದಾನದಲ್ಲಿ ಐತ್ತೂರು ಹಾಗೂ ಬಿಳಿನೆಲೆ ಗ್ರಾಮ ಪಂಚಾಯಿತಿಯ ಗಡಿಭಾಗದ ಓಟಕಜೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.

ಬಿಜೆಪಿ ಕಾಂಗ್ರೆಸ್ ಜಟಾಪಟಿ: ಓಟಕಜೆ ಎನ್ನುವ ಪ್ರದೇಶ ಬಿಳಿನೆಲೆ ಹಾಗೂ ಐತ್ತೂರು ಗ್ರಾಮದ ಗಡಿಭಾಗ. ಒಂದು ಭಾಗ ಬಿಳಿನೆಲೆ ಗ್ರಾಪಂಗೆ ಸೇರಿದರೆ, ಇನ್ನೊಂದು ಭಾಗ ಐತ್ತೂರು ಗ್ರಾಪಂ ವ್ಯಾಪ್ತಿಗೆ ಸೇರಿದೆ. ಬಿಳಿನೆಲೆ ಭಾಗ ಮುಖ್ಯ ರಸ್ತೆಯ ಹತ್ತಿರದಲ್ಲಿ ಇರುವುದರಿಂದ ಆ ಭಾಗಲ್ಲಿ ಗುದ್ದಲಿಪೂಜೆ ನಡೆಯಬೇಕು. ಅದು ರಾಜ್ಯ ಸರ್ಕಾರದ ಅನುದಾನವಾದ್ದರಿಂದ ನಾವು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಹೇಳಿದರೆ, ಐತ್ತೂರು ಭಾಗದ ಜನರು ಕಾಲುಸಂಕದ ಹೆಚ್ಚಿನ ಫಲಾನುಭವಿಗಳಾದುದರಿಂದ ಇಲ್ಲೇ ಗುದ್ದಲಿಪೂಜೆ ನಡೆಯಬೇಕು ಎಂದು ಬಿಜೆಪಿ ಮುಖಂಡರು ಪಟ್ಟು ಹಿಡಿದರು.

ಆ ವೇಳೆಗಾಗಲೇ ಶಾಸಕಿ ಐತ್ತೂರು ಭಾಗಕ್ಕೆ ಅಗಮಿಸಿದ್ದು, ಅಲ್ಲೇ ಗುದ್ದಲಿಪೂಜೆ ನಡೆಸಲು ಸಿದ್ಧತೆ ನಡೆಸಲಾಯಿತು. ಆ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ನೀವು ರಾಜಕೀಯ ಮಾಡುತ್ತಿದ್ದೀರಿ. ಬಿಳಿನೆಲೆ ಭಾಗದಲ್ಲಿ ಗುದ್ದಲಿಪೂಜೆ ನೆರವೇರಿಸಬೇಕು ಎಂದು ಪಟ್ಟು ಹಿಡಿದರು. ಈ ವಿದ್ಯಮಾನ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಇರಿಸುಮುರಿಸು ತರಿಸಿತು. ಬಳಿಕ ಎರಡೂ ಬದಿಯಲ್ಲಿ ಶಾಸಕಿ ಗುದ್ದಲಿಪೂಜೆ ನೆರವೇರಿಸಿ ಇತ್ತಂಡಗಳನ್ನು ಸಮಧಾನಪಡಿಸಿದರು.

ಲೋಕೋಪಯೋಗಿ ಇಲಾಖಾಧಿಕಾರಿ ಪ್ರಮೋದ್ ಕುಮಾರ್ ಕೆ.ಕೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಬಿಳಿನೆಲೆ, ಮಾಜಿ ಅಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಶಿವಕುಮಾರ್, ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲಾ, ಮಾಜಿ ಅಧ್ಯಕ್ಷೆ ಶ್ಯಾಮಲಾ, ಸದಸ್ಯ ಮನಮೋಹನ ಗೋಳ್ಯಾಡಿ, ಕೊಂಬಾರು ಗ್ರಾಪಂ ಅಧ್ಯಕ್ಷ ಮಧುಸೂದನ್ ಒಡೋಳಿ, ಬಿಜೆಪಿ ಮುಖಂಡ ಎ.ಬಿ.ಮನೋಹರ್ ರೈ, ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಗಣೇಶ್ ಮುಜೂರು, ನಿರ್ದೇಶಕ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವಿಧಾನಸಭಾ ದೂರು ಅರ್ಜಿ ಸಮಿತಿ ಸದಸ್ಯ, ಶಾಸಕ ಸುರೇಶ್ ಕುಮಾರ್ ಈ ಭಾಗಕ್ಕೆ ಬಂದು ಹೋದ ಬಳಿಕ ನನ್ನ ಬಳಿ ಚರ್ಚೆ ಮಾಡಿಯೇ ಅನುದಾನ ನೀಡುವ ವ್ಯವಸ್ಥೆ ಆಗಿದೆ. ನನ್ನ ಶಿಫಾರಸ್ಸಿನಂತೆ ಕ್ಷೇತ್ರಕ್ಕೆ ಬರುವ ಅನುದಾನದಿಂದ ಕಡಿತ ಮಾಡಿ ಅನುದಾನ ನೀಡಲಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ನಾವು ರಾಜಕೀಯ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.