ಜಿಲ್ಲೆ

ಸಾಲುಮರದ ತಿಮ್ಮಕ್ಕರಿಂದ ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ

ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರಿಗೆ ಸರ್ಕಾರ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅವರು ಸ್ವಂತ ಸೂರು ನಿರ್ಮಿಸಿಕೊಳ್ಳಲು ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.

ಬಿಡಿಎ ರಚಿತ ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್‌ನಲ್ಲಿ 50/80 ಅಡಿ ವಿಸ್ತೀರ್ಣದ ನಿವೇಶನವನ್ನು ತಿಮ್ಮಕ್ಕ ಅವರಿಗೆ ಸರ್ಕಾರ ಹಂಚಿಕೆ ಮಾಡಿದೆ. 2022ರ ಜೂ.24ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಮ್ಮಕ್ಕಗೆ ಈ ಸೈಟ್‌ನ ಹಂಚಿಕೆ ಪತ್ರವನ್ನು ಹಸ್ತಾಂತರಿಸಿದ್ದರು. ಈಗ ಈ ಸೈಟ್‌ನಲ್ಲೇ ಮನೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಸ್ವಂತ ಸೂರು ಹೊಂದುವ ಆಸೆಗೆ ಸರ್ಕಾರ ಸೈಟ್ ನೀಡಿದೆ. ಇದರಿಂದ ನನಗೆ ತುಂಬಾ ಖುಷಿ ಆಗಿದೆ. ಸೈಟ್ ಕೊಡಿಸುವಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ಸಾಕಷ್ಟು ಶ್ರಮಿಸಿದ್ದಾರೆ. ಆದಷ್ಟು ಬೇಗನೆ ಮನೆ ಕಟ್ಟಿ ಇಲ್ಲೇ ವಾಸಿಸುವುದಾಗಿ ತಿಳಿಸಿದರು.

ಹಸಿರು ಬಡಾವಣೆ ಆಗಲಿ:

ಬಿಡಿಎ ರಚಿಸುತ್ತಿರುವ ಕೆಂಪೇಗೌಡ ಲೇಔಟ್‌ಅನ್ನು ಹಸಿರು ಬಡಾವನೆಯನ್ನಾಗಿಸುವ ಆಶಯ ಹೊಂದಿರುವುದು ಶ್ಲಾಘನೀಯ. ಇದಕ್ಕೆ ತಕ್ಕಂತೆ ಬೇಗನೆ ವಿವಿಧ ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ರೂಪಿಸಬೇಕು. ಇದರಲ್ಲಿ ನಾನೂ ಕೂಡ ಪಾಲ್ಗೊಳ್ಳಲಿದ್ದೇನೆ. ನಾವು ನೆಡುವ ಗಿಡಗಳು ಮರವಾಗಿ ಪ್ರಾಣಿ ಪಕ್ಷಿಗಳಿಗೆ ಆಹಾರ, ಆಶ್ರಯ ಒದಗಿಸುತ್ತದೆ. ಹೀಗಾಗಿ ಎಲ್ಲರೂ ಮನೆ ಸೈಟ್‌ಗಳ ಮುಂದೆ ಗಿಡ ನೆಟ್ಟು ಬೆಳೆಸಬೇಕು ಎಂದು ತಿಮ್ಮಕ್ಕ ಕಿವಿಮಾತು ಹೇಳಿದರು.