ಜಿಲ್ಲೆ

ಜನರ ಶಾಪಕ್ಕೆ ಗುರಿಯಾಗುತ್ತೀರಾ : ಅಧಿಕಾರಿಗಳಿಗೆ ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಎಚ್ಚರಿಕೆ

Tumakuru

ಗುಬ್ಬಿ: ಕೊಳಚೆ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಅಗತ್ಯವಿರುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜಮೀನು ಮಾಲೀಕರನ್ನು ಸಂಪರ್ಕಿಸಿ ಮಾತನಾಡಿದ್ದೇವೆ. ಶಾಸಕರ ಸಮ್ಮುಖದಲ್ಲಿ ಅದನ್ನು ಬಗೆಹರಿಸಿ ಅತಿಶೀಘ್ರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಒಪ್ಪಿಸಲಾಗುವುದು. ಯುಜಿಡಿ ಕಾಮಗಾರಿಗೆ ಪಟ್ಟಣ ಪಂಚಾಯಿತಿಯಿಂದ ಅಗತ್ಯ ವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ಯುಜಿಡಿ ಕಾಮಗಾರಿಯಿಂದ ಜನರಿಗೆ ತೀವ್ರ ತೊಂದರೆಗಳಾಗುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಕಾಮಗಾರಿ ವಿಳಂಬ, ಗುಣಮಟ್ಟದಲ್ಲಿ ಲೋಪವಾಗದಂತೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಜನರ ಶಾಪಕ್ಕೆ ಗುರಿಯಾಗುತ್ತೀರಾ? ಸಾರ್ವಜನಿಕರು ಈ ಕಾಮಗಾರಿಯ ಬಗ್ಗೆ ಸಾಕಷ್ಟು ಕೇಳುತ್ತಿದ್ದಾರೆ. ನಾವು ಏನು ಹೇಳಬೇಕೆಂಬುದೇ ತಿಳಿಯುತ್ತಿಲ್ಲ. ಅತೀ ಶೀಘ್ರದಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯುಜಿಡಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಕೆಲವು ಕಡೆ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಇಂಜಿನಿಯರ್ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಸದಸ್ಯ ಮೋಹನ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕುಮಾರ್, ಯುಜಿಡಿ ಕಾಮಗಾರಿ ಮುಗಿಯದೆ ನಮ್ಮ ವಾರ್ಡ್‌ಗಳ ರಸ್ತೆಗಳಿಗೆ ಡಾಂಬರು ಹಾಕಲು ಸಾಧ್ಯವಾಗುತ್ತಿಲ್ಲ. ಮನೆಗಳಲ್ಲಿ ನಿರ್ಮಿಸಿರುವ ಚೇಂಬರ್‌ಗಳು ಕಳಪೆ ಗುಣಮಟ್ಟದಾಗಿವೆ ಎಂದು ಸಭೆಯ ಗಮನಸೆಳೆದರು.

ಶಾಸಕ ಎಸ್.ಆರ್.ಶ್ರೀನಿವಾಸ್, ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸದಸ್ಯರಾದ ಶಶಿಕುಮಾರ್, ಕೃಷ್ಣಮೂರ್ತಿ, ಸಿದ್ದರಾಮಣ್ಣ, ಮೋಹನ್, ರೇಣುಕಾಪ್ರಸಾದ್, ರಂಗಸ್ವಾಮಿ, ಕುಮಾರ್ , ಶೌಕತ್ ಆಲಿ, ಮೊಹಮ್ಮದ್ ಸಾಧಿಕ್, ಮಂಗಳಮ್ಮ ,ಜಯಲಕ್ಷ್ಮಿ, ಮಮತಾ , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೋಗೀಶ್, ಜಲಮಂಡಳಿ ಇಂಜಿನಿಯರ್ ಸಿದ್ದನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.