ತುಮಕೂರು: ಗುಬ್ಬಿ ಪಟ್ಟಣದಲ್ಲೂ ಸಹ ಇಡೀ ರಾತ್ರಿ ನಿರಂತರವಾಗಿ ಮಳೆ ಸುರಿದಿದ್ದು ರೈಲ್ವೆ ಅಂಡರ್ಪಾಸ್ ಅಕ್ಷರಷ ಕೆರೆಯಂತಾಗಿದೆ. ಈ ರೈಲ್ವೆ ಅಂಡರ್ಪಾಸ್ ಕೆಳಗೆ ಹಾದು ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ನೀರಿನಲ್ಲಿ ಸಿಲುಕಿ ಪ್ರಯಾಣಿಕರು, ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿಮಾರ್ಣವಾಗಿತ್ತು.
ಗುಬ್ಬಿ-ಚೇಳೂರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿರುವ ಈ ರೈಲ್ವೆ ಅಂಡರ್ಪಾಸ್ ಕೆಳಗೆ ಸುಮಾರು 45 ನಿಮಿಷಗಳ ಕಾಲ ಬಸ್ ಸಿಲುಕಿಕೊಂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅಂಡರ್ ಪಾಸ್ ಕೆಳಗೆ ನಿಂತಿದ್ದ ಮಳೆ ನೀರಿನಲ್ಲಿ ಬಸ್ ಸಿಲುಕಿಕೊಂಡಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ಬಸ್ನಲ್ಲಿದ್ದ ವಿದ್ಯಾರ್ಥಿಗಳು, ನಿರ್ವಾಹಕರು ಹಾಗೂ ಪ್ರಯಾಣಿಕರನ್ನು ಸುರತವಾಗಿ ಹೊರಬಂದರು.
ಪ್ರತಿ ಬಾರಿಯೂ ಮಳೆ ಬಂದಾಗ ಇದೇ ರೀತಿ ನೀರು ಈ ಅಂಡರ್ಪಾಸ್ನಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗುಬ್ಬಿ ಪಟ್ಟಣದ ಬಿ.ಹೆಚ್. ರಸ್ತೆ, ಸಂತೆಪೇಟೆ, ಬೆಲ್ಲದಪೇಟೆ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ಪ್ರಯಾಸ ಪಡುವಂತಾಯಿತು.