ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  
ಜಿಲ್ಲೆ

ಬೇರೆ ರಾಜ್ಯಗಳಲ್ಲಿ ಪ್ರಜ್ವಲಿಸಿದ ಗ್ಯಾರಂಟಿ ಪ್ರತಿಬಿಂಬ

ಶಿವಮೊಗ್ಗ: ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಲ್ಲಿ ಆಗುತ್ತಿರುವ ಅನ್ಯಾಯದ ಪ್ರತಿಬಿಂಬ ಬೇರೆ ರಾಜ್ಯಗಳಲ್ಲಿ ಪ್ರಜ್ವಲಿಸುತ್ತಿದೆ. ಅದರ ಪರಿಣಾಮವೇ ನಾಲ್ಕರಲ್ಲಿ ಮೂರು ರಾಜ್ಯಗಳಲ್ಲಿ ಮತದಾರ ಬಿಜೆಪಿ ಕೈಹಿಡಿದಿದ್ದಾನೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಭಾನುವಾರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳಿಗೆ ಜನರ ಜೇಬಿಗೆ ಕೈಹಾಕುತ್ತಿದೆ ಎಂಬುದು ಮನವರಿಕೆಯಾಗಿದೆ. ಹಾಗಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ ಎಂದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಬಿಜೆಪಿಗೆ ವರವಾಗಿದೆ. ಮಧ್ಯಪ್ರದೇಶದಲ್ಲಿ ಸ್ವಚ್ಛ ಆಡಳಿತದ ನಡೆಸಿದ್ದನ್ನು ಜನರು ಒಪ್ಪಿ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಮತದಾನೋತ್ತರ ಸಮೀಕ್ಷೆಯಲ್ಲಿ ಛತ್ತೀಸ್‌ಗಢ ಕಷ್ಟ ಎಂದು ಹೇಳಲಾಗಿತ್ತು. ಆದರೆ ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಅಧಿಕಾರವನ್ನು ಕೊಟ್ಟಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಆಡಳಿತ ಇರಲಿದೆ ಎಂದರು.