ಯಲ್ಲಾಪುರ: ಕೊಟ್ಟ ಮಾತಿನಂತೆ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಗ್ಯಾರಂಟಿ ಯೋಜನೆ ತಲುಪುವಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಪಟ್ಟಣದ ತಾಪಂ ಆವಾರದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆ ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಸಮಿತಿ ಮಾಡಲಿದೆ ಎಂದರು.
ಆಡಳಿತ ಸುಧಾರಣೆ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಗ್ಯಾರಂಟಿ ಯೋಜನೆ ಸದುಪಯೋಗವಾದಾಗ ಮಾತ್ರ ಸರ್ಕಾರದ ಆಶಯ ಸಾರ್ಥಕವಾಗುತ್ತದೆ. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಯುವಕರನ್ನು ತಲುಪುವಲ್ಲಿ ವಿಫಲವಾಗಿರುವುದು ಕಂಡು ಬರುತ್ತಿದೆ. ಜಿಲ್ಲೆಯ ಎಲ್ಲ ನಿರುದ್ಯೋಗಿ ಯುವಕರಿಗೆ ಯೋಜನೆ ತಲುಪುವಂತೆ ಸಮಿತಿಯವರು ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಆರ್ಥಿಕವಾಗಿ ಉತ್ತಮ ಸ್ಥಿತಿ ಇದ್ದವರು ಅವರಾಗಿಯೇ ಇಂತಹ ಯೋಜನೆಗಳು ತನಗೆ ಬೇಡ ಎಂದು ಹೇಳುವ ಗುಣ ತೋರಬೇಕು. ನಿಜವಾದ ಬಡವರಿಗೆ ಯೋಜನೆ ತಲುಪಬೇಕು ಎಂದರು.
ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ತಾಲೂಕು ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಉಪವಿಭಾಗಾಧಿಕಾರಿ ಕ್ಯಾವಾರಾಣಿ, ತಹಸೀಲ್ದಾರ್ ಅಶೋಕ ಭಟ್ಟ, ತಾಪಂ ಆಡಳಿತಾಧಿಕಾರಿ ನಟರಾಜ.ಟಿ.ಎಚ್., ತಾಪಂ ಇಒ ರಾಜೇಶ ಧನವಾಡಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಇತರರಿದ್ದರು. ಎಂ.ಕೆ. ಭಟ್ಟ ಯಡಳ್ಳಿ ನಿರ್ವಹಿಸಿದರು.
ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದಿಂದ ಅಧ್ಯಕ್ಷ ಎಂ.ಕೆ. ಯಡಳ್ಳಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಕಾಳು ವೈದ್ಯ, ದೇಶಪಾಂಡೆ ಹಾಗೂ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾವಿನಮನೆ ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ ಮನವಿ ವಾಚಿಸಲು ಆರಂಭಿಸಿದರು. ‘ಗ್ರಾಪಂಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ, ಗ್ರಾಪಂ ಸದಸ್ಯರಿಗೆ ಯಾವುದೇ ಕಿಮ್ಮತ್ತಿಲ್ಲ ಎಂಬಂತಾಗಿದೆ’ ಎಂದಾಗ, ಮಧ್ಯ ಪ್ರವೇಶಿಸಿದ ದೇಶಪಾಂಡೆ ಗರಂ ಆದರು. ‘ಮನವಿ ನೀಡಿದರೆ ನಾವೇ ಓದಿಕೊಳ್ಳುತ್ತೇವೆ. ನಿಮ್ಮ ಭಾಷಣದ ಅಗತ್ಯವಿಲ್ಲ. ಬಡವರಿಗಾಗಿ ಇಷ್ಟೆಲ್ಲ ಯೋಜನೆಗಳನ್ನು ನೀಡಿದ ಸರ್ಕಾರವನ್ನು ದೂರುವ, ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕಾರ್ಯ ಮಾಡಬೇಡಿ’ ಎಂದು ಗದರಿದರು.