ಮೈಸೂರು: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಗೆದ್ದಿರುವ ಕಾಂಗ್ರೆಸ್, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಬಾರದು ಎಂದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕಾಡಾ ಕಚೇರಿ ಆವರಣದಲ್ಲಿ ಆರಂಭಗೊಂಡ ಸಂಸದರ ನೂತನ ಕಚೇರಿಗೆ ಬುಧವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಗೆದ್ದಿರುವ ಕಾಂಗ್ರೆಸ್ ಯೋಜನೆಗಳನ್ನು ಮುಂದುವರಿಸಬೇಕು. ಜನರು ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್‌ಗೆ ಅಧಿಕಾರ ನೀಡಿರುವಾಗ ಯೋಜನೆಗಳ ಪರಿಷ್ಕರಣೆ ಅಥವಾ ಸ್ಥಗಿತ ಮಾಡಬಾರದು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಲ ಕಾಲಕ್ಕೆ ಜಲಾಶಯಗಳ ಪರಿಶೀಲನೆ ಮಾಡಿ ದುರಸ್ತಿ ಮಾಡಬೇಕು. ಇದು ಸರ್ಕಾರಗಳ ಜವಾಬ್ದಾರಿ. ನೂರಾರು ವರ್ಷಗಳ ಹಳೆಯ ಜಲಾಶಯಗಳ ಪರಿಶೀಲಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಹಾಗೆಯೇ ಕೆಆರ್‌ಎಸ್ ಡ್ಯಾಮ್ ಅನ್ನು ಕೂಡ ಪರಿಶೀಲಿಸಬೇಕು ಎಂದರು.
ಸಂಪ್ರದಾಯದಂತೆ ಅರಮನೆಯಿಂದ ಆ.15ರಂದು ಬಾಗಿನ ಅರ್ಪಿಸಿ, ಅರಮನೆ ಪರಿಶೀಲನೆ ಮಾಡಲಾಗುವುದು. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿಯಿಂದ ಮೈಸೂರು ಚಲೋ ಪಾದಯಾತ್ರೆ ಬಳಿಕ ಮತ್ತೊಂದು ಬಣದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ವಿಚಾರ ನನಗೆ ತಿಳಿದಿಲ್ಲ. ಪಾದಯಾತ್ರೆ ಸಂಬಂಧ ನಡೆದ ಸಭೆಯಲ್ಲಿ ಭಾಗಿಯಾದವರನ್ನೇ ಕೇಳಬೇಕು.
ಕಾಂಗ್ರೆಸ್ ಮಾಡಿರುವ ಹಗರಣಗಳ ವಿರುದ್ಧ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ ನಡೆದಿದೆ. ಆದರೆ ಮತ್ತೊಂದು ಬಣದ ಪಾದಯಾತ್ರೆ ವಿಚಾರದ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.
ಕಾನೂನಾತ್ಮಕವಾಗಿ ಹೋರಾಟ ಮುಂದುವರಿಯಲಿದೆ:
ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಮುಂದೆಯೂ ಹಾಗೆಯೇ ಇರಲಿ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಪ್ರಾಧಿಕಾರ ರಚನೆ ಮಾಡಲು ಸಾಧ್ಯವಿಲ್ಲ. ಈ ಕುರಿತು ತಾಯಿಯೂ ಮಾತನಾಡಿದ್ದು, ಕಾನೂನಾತ್ಮಕವಾಗಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಹೊಸ ಕಚೇರಿ ಸಾರ್ವಜನಿಕರ ಕಚೇರಿಯಾಗಿದ್ದು, ಜನರು ಯಾವಾಗ ಬೇಕಾದರೂ ಬರಬಹುದು. ಈ ಹಿಂದೆ ಈ ಕಟ್ಟಡ ಅರಮನೆ ಕಚೇರಿಯೂ ಅಗಿದ್ದು, ಸಾರ್ವಜನಿಕ ಸೇವೆ ಮಾಡಿಕೊಂಡು ಬರುತ್ತಿದೆ. ಹಾಗಾಗಿ ಈಗಲೂ ಇಲ್ಲಿಯೇ ಸಾರ್ವಜನಿಕರ ಕಚೇರಿ ತೆರೆಯಲಾಗಿದೆ. ಪ್ರವಾಸ, ಕಾರ್ಯಕ್ರಮಗಳು ಇಲ್ಲದ ಸಮಯದಲ್ಲಿ ನಾನೂ ಸಹ ಈ ಕಚೇರಿಯಲ್ಲಿಯೇ ಲಭ್ಯ ಇರುತ್ತೇನೆ ಎಂದು ಹೇಳಿದರು.