ಕುಶಾಲನಗರ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ಮತ್ತು ಸಮಿತಿ ನಾಮನಿರ್ದೇಶಿತ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯತತ್ಪರರಾಗಬೇಕೆಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಕುಶಾಲನಗರದ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕುಶಾಲನಗರ ತಾಲೂಕು ಕೇಂದ್ರವಾಗಿ ಘೋಷಣೆಗೊಂಡ ಬಳಿಕ ತಹಸೀಲ್ದಾರ್ ಬಳಿಗೆ ತಾಲ್ಲೂಕಿನಾದ್ಯಂತದಿAದ ಜನಸಾಮಾನ್ಯರು ಸಮಸ್ಯೆಗಳನ್ನು ಹೊತ್ತು ಧಾವಿಸುತ್ತಾರೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರತೀ ಮಂಗಳವಾರ ಕುಶಾಲನಗರದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಜನಸಾಮಾನ್ಯರ ಬವಣೆಗಳನ್ನು ಅರಿತು ಬಗೆಹರಿಸಬೇಕೆಂದು ಈ ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಸಂಬAಧಿತ ಅಧಿಕಾರಿ ಕುಶಾಲನಗರದ ಕಚೇರಿಗೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಶಿಧರ್ ಹೇಳಿದರು.
ಕುಶಾಲನಗರದಲ್ಲಿ ತಮಗೆ ಕಾರ್ಯನಿರ್ವಹಿಸಲು ಸೂಕ್ತ ಸ್ಥಳಾವಕಾಶದ ಕೊರತೆ ಇದ್ದುದರಿಂದ ಬರಲಾಗಿಲ್ಲ ಎಂದು ಸಿಡಿಪಿಒ ಹೇಳಿದಾಗ, ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕರ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆ ಬಗೆಹರಿಸಬೇಕೆಂದು ಶಶಿಧರ್ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯರು ತಮ್ಮ ಗ್ರಾಮಗಳು ಹಾಗೂ ಪಂಚಾಯಿತಿಗಳ ಆಯಾಯ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರಿಗೆ ಸರ್ಕಾರದ ಯೋಜನೆಗಳು ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಬAಧಿಸಿದ ಗ್ರಾಪಂ ಪಿಡಿಒಗಳು, ಅಂಗನವಾಡಿ ಸಹಾಯಕಿಯರು, ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳು ಸಮಿತಿಯ ಸದಸ್ಯರೊಂದಿಗೆ ಸಂಪೂರ್ಣ ಸಹಕರಿಸಬೇಕೆಂದು ಶಶಿಧರ್ ಹೇಳಿದರು.
ಪ್ರತೀ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಗಳು ನಡೆಯುವ ಸಂದರ್ಭ ಅನುಷ್ಠಾನ ಸಮಿತಿ ಸದಸ್ಯರುಗಳನ್ನು ಕಡ್ಡಾಯವಾಗಿ ಆಹ್ವಾನಿಸುವಂತೆ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳೂ ಆದ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಆಹಾರ ನಿರೀಕ್ಷಕಿ ಸ್ವಾತಿ ಮಾಹಿತಿ ನೀಡಿ, ಕುಶಾಲನಗರ ತಾಲೂಕಿನಲ್ಲಿ 51 ನ್ಯಾಯ ಬೆಲೆ ಅಂಗಡಿಗಳಿದ್ದು, 5208 ಅಂತ್ಯೋದಯ, 64060 ಬಿಪಿಎಲ್, 4804 ಎಪಿಎಲ್ ಪಡಿತರ ಚೀಟಿಗಳಿವೆ ಎಂದರು.
ಶಕ್ತಿ ಯೋಜನೆಯ ಮಡಿಕೇರಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಕಿಶೋರ್ ಜಾಧವ್ ಮಾಹಿತಿ ನೀಡಿ, ಶಕ್ತಿ ಯೋಜನೆ 2023 ರ ಜೂನ್ 11 ರಂದು ಚಾಲನೆಗೊಂಡಿದ್ದು, ಒಟ್ಟು 73,90,659 ವಯಸ್ಕ ಮಹಿಳಾ ಪ್ರಯಾಣಿಕರು, 1,52,214 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ಸಂಸ್ಥೆಗೆ 29,06,49,026 ರೂ ಆದಾಯ ಬಂದಿರುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ನಾಯಕ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ರೇಖಾ ಗಣಪತಿ, ಕುಶಾಲನಗರ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಭೀಮಯ್ಯ, ಸದಸ್ಯರಾದ ಆದಂ, ಮಲ್ಲಿಕಾರ್ಜುನ, ರಫೀಕ್ ಖಾನ್, ಹೆಚ್.ಎನ್. ರಾಜಶೇಖರ್, ಸುಹಾದ ಅಶ್ರಫ್, ಕಿಶೋರ್, ವಿವೇಕಾನಂದ, ಎಸ್.ಎ.ಶ್ರೀನಿವಾಸ್, ಕೆ.ಎಸ್.ಕೃಷ್ಣೇಗೌಡ, ಕೂಡಿಗೆ ಅಣ್ಣಯ್ಯ, ಹಾರಂಗಿ ಶ್ರೀನಿವಾಸ್ ಇದ್ದರು.