ಜಿಲ್ಲೆ

ಅಕ್ಕಿಯೊಂದಿಗೆ ರಾಗಿ ನೀಡಲು ನಿರ್ಧಾರ: ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ ಮಾಹೆಯಿಂದ ಹಣದ ಬದಲು ಅಕ್ಕಿ ನೀಡಲಾಗುತ್ತಿದೆ. ಅದೇ ರೀತಿ ಮುಂದಿನ ಮಾಹೆಯಿಂದ ಅಕ್ಕಿಯೊಂದಿಗೆ ರಾಗಿ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಗಿಯ ಗುಣಮಟ್ಟವನ್ನು ಪರಿಶೀಲಿಸಿ ನಂತರ ವಿತರಿಸಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಕಂಡಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಅರ್ಹ ಫಲಾನುಭವಿಗಳಗೆ ಯೋಜನೆ ತಲುಪುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಿ ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ಒಟ್ಟು 4,63,565 ಫಲನುಭವಿಗಳಿಗೆ 51.40 ಕೋಟಿ ರೂ ಅನುದಾನ ನೀಡಲಾಗಿದೆ. ಫೆಬ್ರವರಿ ಹಾಗೂ ಮಾರ್ಚ್ ಮಾಹೆಯ ಹಣ ಪಾವತಿಗೆ ಬಾಕಿ ಇದ್ದು, ರಾಜ್ಯ ಸರ್ಕಾರಕ್ಕೆ ಬಾಕಿಯಿರುವ ಗೃಹಲಕ್ಷ್ಮೀ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಲಾಗುವುದು. ಶಕ್ತಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಮಾರ್ಚ್ ಮಾಹೆಯಿಂದ ಮೇವರೆಗೆ 1,95,60,641 ಟಿಕೆಟ್ ಪಡೆದು ಮಹಿಳೆಯರು ಸಂಚರಿಸಿದ್ದು, ಒಟ್ಟು 61.61 ಕೋಟಿ ರೂಗಳಲ್ಲಿ ಮೊತ್ತ ವೆಚ್ಚವಾಗಿರುತ್ತದೆ ಎಂದು ಹೇಳಿದರು.

ಯುವನಿಧಿ ಯೋಜನೆಯ ಸೌಲಭ್ಯವು ನಿರುದ್ಯೋಗಿ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸಬೇಕು. ಈಗಾಗಲೇ ಯುವನಿಧಿ ಯೋಜನೆಯಡಿ ನೋಂದಣಿಗೊಂಡಿರುವವರಲ್ಲಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿದ್ದಲ್ಲಿ ವಿಲೇವಾರಿ ನಡೆಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿ. ಜಿಲ್ಲೆಯಲ್ಲಿ ಯುವನಿಧಿಯಡಿ ಒಟ್ಟು 5,271 ಫಲಾನುಭಗಳಿದ್ದು, ಶೇ.80.39ರಷ್ಟು ಫಲಾನುಭವಿಗಳಿಗೆ ಯುವನಿಧಿ ಹಣ ನೀಡಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಧನುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್‌ಬಾಬು, ತಾಲೂಕು ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಸದಸ್ಯೆ ವೀಣಾ ಶಂಕರ್ ಇತರರಿದ್ದರು.