ಮಂಡ್ಯ: ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಕಡುಬಡವರಿಗೆ ತಲುಪುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 4,63,144 ಫಲಾನುಭವಿಗಳಿದ್ದು, 2024ರ ಫೆಬ್ರವರಿಯಿಂದ 2025ರ ಏಪ್ರಿಲ್ವರೆಗೆ ಒಟ್ಟು 1237.54 ಕೋಟಿ ರೂ ಅನುದಾನ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದರು.
ಗೃಹಲಕ್ಷ್ಮೀ ಹಣವು ಬಡ ಕುಟುಂಬಗಳಿಗೆ ತಲುಪುತ್ತಿರುವ ಹಾಗೂ ಯಾವುದಾದರೂ ತೊಂದರೆಯಿಂದ ಅರ್ಹ ಫಲಾನುಭವಿ ಬಿಟ್ಟು ಹೋಗಿದ್ದಲ್ಲಿ ತಿಳಿದುಕೊಳ್ಳಲು ಸಮೀಕ್ಷೆಯ ಅಗತ್ಯವಿದೆ. ಸರ್ವೇ ನಡೆಸಲು ಅಂಗನವಾಡಿ ಕಾರ್ಯಕರ್ತೆಯರ ತಂಡವನ್ನು ರೂಪಿಸಿ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ 2023 ರ ಜುಲೈನಿಂದ 2024ರ ಡಿಸೆಂಬರ್‌ವರೆಗೆ ಒಟ್ಟು 4,47,166 ಫಲಾನುಭವಿಗಳಿಗೆ 402.06 ಕೋಟಿ ರೂ ಪಾವತಿಸಲಾಗಿದೆ. 2025ರ ಫೆಬ್ರವರಿ ಮಾಹೆಯಿಂದ ಏಪ್ರಿಲ್ ಮಾಹೆಯವರೆಗೆ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಮಹಿಳೆಯರು ಒಟ್ಟು 1,87,40,507 ಟಿಕೆಟ್ ಪಡೆದು ಸಂಚರಿಸಿರುತ್ತಾರೆ. ಇದಕ್ಕಾಗಿ ಒಟ್ಟು 58.39 ಕೋಟಿ ರೂ ವೆಚ್ಚವಾಗಿರುತ್ತದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೆರೆಯಂಗಳದಲ್ಲಿ ಬೆಳಗ್ಗೆ 8.30ರಿಂದ 9.30ರವರೆಗೆ ಪ್ರತ್ಯೇಕ ಬಸ್‌ನ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 5,07,543 ಫಲಾನುಭವಿಗಳಿದ್ದು, 2023 ರ ಆಗಸ್ಟ್‌ನಿಂದ 2025 ರ ಏಪ್ರಿಲ್ವರೆಗೆ 40,52,24,132 ಯೂನಿಟ್ ವಿದ್ಯುತ್ ಬಳಕೆಯಾಗಿರುತ್ತದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2023 ರಿಂದ ಒಟ್ಟು 6,235 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಅವರಲ್ಲಿ ಶಿಕ್ಷಣ ಪಡೆಯುತ್ತಿರುವ ಹಾಗೂ ಉದ್ಯೋಗ ಹೊಂದಿರುವ 1,511 ಅರ್ಜಿ ತಿರಸ್ಕರಿಸಲಾಗಿದ್ದು, ಒಟ್ಟು 4,702 ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯುತ್ತಿರುತ್ತಾರೆ ಎಂದು ಹೇಳಿದರು.
ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರಶಾಂತ್‌ಬಾಬು, ಎಸ್.ಎಚ್.ರಾಜೇಂದ್ರ, ಕೆ.ಹನುಮಂತಯ್ಯ, ಸದಸ್ಯರಾದ ಬಸವರಾಜು, ಮಹಮ್ಮದ್ ಅನ್ಸರ್, ಪಿ.ಮಾದೇಶ, ಎಚ್.ಕೆ.ರುದ್ರಪ್ಪ, ಜಿಪಂ ಯೋಜನಾಧಿಕಾರಿ ಧನುಷ್ ಉಪಸ್ಥಿತರಿದ್ದರು.