ಪಾಮನಕಲ್ಲೂರಿನಲ್ಲಿ ಗ್ಯಾರಂಟಿ ನಡೆ ಪಂಚಾಯಿತಿ ಕಡೆ ಕಾರ್ಯಕ್ರಮವನ್ನು ಶಾಸಕ ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಮೈಬುಸಾಬ್ ಮುದ್ದಾಪುರ, ತಹಸೀಲ್ದಾರ್ ಮಲ್ಲಪ್ಪ ಯರಗೋಳ, ಪಾಮನಕಲ್ಲೂರು ಗ್ರಾಪಂ ಅಧ್ಯಕ್ಷೆ ಬಸಮ್ಮ, ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರಗೌಡ ದೇವರಮನಿ, ಸದಸ್ಯರಾದ ನಾಗರತ್ಮ ಕಟ್ಟಿಮನಿ, ಪೋಲ್‌ರಾಜ, ಆಲಂಬಾಷಾ ಇತರರಿದ್ದರು. 
ಜಿಲ್ಲೆ

ಗ್ಯಾರಂಟಿ ಯೋಜನೆಯ ಅಪಪ್ರಚಾರ ಸಲ್ಲ

ರುದ್ರಪ್ಪ ವಾಲಿ

ಕವಿತಾಳ: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಾಮನಕಲ್ಲೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ನಡೆ ಪಂಚಾಯಿತಿ ಕಡೆ ಕಾರ್ಯಕ್ರಮನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಯ ಸಾಧಕ ಬಾಧಕಗಳ ಚರ್ಚೆ ನಡೆಸಲು ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ, ಬಿಜೆಪಿಯವರು ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ತಲಾ ಆದಾಯ ಹೆಚ್ಚಳವಾಗಿದೆ. ನಾನು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ. ಆದರೆ ಕೆಲವರು ನೀರು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ರೈತರಿಗೆ ನೀರು ನೀಡುವುದು ತಪ್ಪೇ ಎಂದು ಪ್ರಶ್ನಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಆನಂದಗಲ್‌ನಲ್ಲಿ ಒಂದು ದಿನ ಕೆಲಸ ನೀಡಲಾಗಿದೆ. ನಮಗೆ ನೂರು ದಿನ ಕೆಲಸ ನೀಡಬೇಕೆಂದು ಮಹಿಳೆಯೊಬ್ಬರು ಶಾಸಕರ ಗಮನಕ್ಕೆ ತಂದರು. ಕೂಲಿಕಾರ್ಮಿಕರಿಗೆ 100 ದಿನ ಕೆಲಸ ನೀಡದೆ ಕರ್ತವ್ಯ ಲೋಪ ಎಸಗಿದ ಪಿಡಿಒ ಅನ್ನು ವಜಾ ಮಾಡಲಾಗುವುದು ಎಂದು ಬಸನಗೌಡ ತುರ್ವಿಹಾಳ ತಿಳಿಸಿದರು.

ಸದಸ್ಯರಾದ ನಿಜಗುಣಿ ಸರ್ಜಾಪುರ, ಚನ್ನಬಸವ, ಕನಕಪ್ಪ, ಬಾಲರಾಜ, ಜೆಸ್ಕಾಂ ಅಧಿಕಾರಿ ವೆಂಕಟೇಶ ಇತರರಿದ್ದರು.