ಚಿಕ್ಕಬಳ್ಳಾಪುರ: ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಶೋಷಿತ ವರ್ಗಕ್ಕೆ ಅನ್ಯಾಯ ಎಸಗುತ್ತಿರುವುದಕ್ಕೆ ವ್ಯಕ್ತವಾಗುತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಅಭಿವೃದ್ಧಿ ಕಡೆಗಣಿಸಿ ಉಚಿತ ಕೊಡುಗೆಗಳ ೋಷಣೆ ಮಾಡಲಾಯಿತು. ಇವು ಪ್ರಾರಂಭದಿಂದಲೂ ಸಮರ್ಪಕವಾಗಿ ಅರ್ಹರಿಗೆ ಸಿಗುತ್ತಿಲ್ಲ. ಆರ್ಥಿಕ ಹೊರೆ ನಿಭಾಯಿಸಲು ಸಾಧ್ಯವಾಗದೆ ಪ್ರಗತಿದಾಯಕ ಕಾಮಗಾರಿಗಳ ನಿರ್ವಹಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಕಾಣಬಹುದು ಎಂದರು.
ಅಹಿಂದ ವರ್ಗದ ನಾಯಕ ಸಿಎಂ ಸಿದ್ದರಾಮಯ್ಯ ಎಸ್‌ಸಿಪಿ, ಟಿಸಿಪಿ ಯೋಜನೆಗಳ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ಶೋಷಿತ ವರ್ಗವನ್ನು ವಂಚಿಸುತ್ತಿದ್ದಾರೆ. ಸಮುದಾಯಗಳು ವಿವಿಧ ಸವಲತ್ತುಗಳಿಂದ ವಂಚಿತವಾಗುತ್ತಿದ್ದು, ಇದರ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಬಜೆಟ್‌ನಲ್ಲಿ ಸಮರ್ಪಕವಾಗಿ ಶೋಷಿತ ವರ್ಗಕ್ಕೆ ಅಗತ್ಯ ಅನುದಾನವನ್ನು ಮೀಸಲಿಡಬೇಕು. ಹಾಗೆಯೇ ಅಭಿವೃದ್ಧಿಗೆ ಖರ್ಚು ಮಾಡಬೇಕು. ಇದನ್ನು ಬಿಟ್ಟು ದುರ್ಬಳಕೆಗೆ ಮತ್ತೆ ಅವಕಾಶ ನೀಡಿದರೆ ತಕ್ಕಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಪಂ ಮಾಜಿ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ, ನರಸಿಂಹಮೂರ್ತಿ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತ ಮುನಿಯಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ.ಎನ್.ಗಂಗಾಧರ್, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಕೊಳವನಹಳ್ಳಿ ಮುನಿರಾಜು ಮತ್ತಿತರರು ಭಾಗವಹಿಸಿದ್ದರು.
ರಾಜ್ಯ ಸರ್ಕಾರದಿಂದ ದಲಿತ ವಿರೋಧಿ ನಡೆ
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಪರಿಶಿಷ್ಟರ ಅಭಿವೃದ್ಧಿಗೆ ಸಂಬಂಧಿಸಿದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಡಿ ರಾಜ್ಯ ಬಜೆಟ್‌ನ ಯೋಜನಾ ವೆಚ್ಚದಲ್ಲಿ ಶೇ.24.1 ಅನುದಾನ ಮೀಸಲಿಡಲಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳಲ್ಲಿನ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರವು ದಲಿತ ವಿರೋಧಿ ನಡೆ ಅನುಸರಿಸುತ್ತಿರುವುದು ಖಂಡನೀಯ. 2025-26ರಲ್ಲೂ ಗ್ಯಾರಂಟಿಗಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿಯ 14,488 ಕೋಟಿ ರೂ. ಅನುದಾನ ಬಳಸಿಕೊಳ್ಳಲು ಸವಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ ಚುನಾವಣೆಯಲ್ಲಿ ಹಣ ಹೆಂಡ ಹಂಚಿಕೆಗೆ ಬಳಸಿ ವಂಚಿಸಲಾಯಿತು. ಈಗ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ವಿಚಾರವಾಗಿ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಸಚಿವರು, ಶಾಸಕರು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ಚರ್ಚೆ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಚರ್ಚೆ ಸಾಮಾನ್ಯ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ನಾಯಕರೊದಿಗೆ ಚರ್ಚಿಸುವುದಲ್ಲದೆ ಸಂಘಟನೆ ವಿಚಾರವಾಗಿ ಮಾರ್ಗದರ್ಶನ ಪಡೆಯಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ, ಸಣ್ಣ ಸಣ್ಣ ವಿಚಾರಗಳಿಗೆ ಸ್ಪಂದಿಸುವ ಅವಶ್ಯಕತೆ ಇಲ್ಲ ಬಿಡಿ ಎಂದಷ್ಟೇ ಹೇಳಿದರು.