ಜಿಲ್ಲೆ

ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ

ಸೌಮ್ಯ ಆರ್

ಬಂಟ್ವಾಳ: ತಾಲೂಕುಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿಪರಿಶೀಲನಾ ಸಭೆ ಸಮಿತಿ ಕಚೇರಿಯಲ್ಲಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.

ಫ್ಲೈಓವರ್ ನಿರ್ಮಾಣ ಬಳಿಕ ಉಪ್ಪಿನಂಗಡಿಯಿಂದ ಬರುವ ಬಸ್‌ಗಳು ಮಾಣಿ ಜಂಕ್ಷನ್‌ಗೆ ಬರುತ್ತಿಲ್ಲ. ಇದರಿಂದ ಮಾಣಿ ಗ್ರಾಮದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಕೆಎಸ್ಸಾರ್ಟಿಸಿ ಡಿಪೋ ಮಂಗಳೂರು, ಪುತ್ತೂರು ನಿಯಂತ್ರಣಾಧಿಕಾರಿ ಅವರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.

ಅನಂತಾಡಿ ಗ್ರಾಮದ ಬಂಟ್ರಿಂಜ - ವಿಟ್ಲ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಗ್ಯಾರಂಟಿ ಸಮಿತಿ ಅಧ್ಯಕ್ಷರ ಮನವಿಗೆ ಸ್ಪಂದಿಸಿ ಅನಂತಾಡಿ ಗ್ರಾಮಕ್ಕೆ ಬಸ್ ಸಂಚಾರದ ವ್ಯವಸ್ಥೆ ಮಾಡಿರುವ ಕೆಎಸ್ಸಾರ್ಟಿಸಿ ಡಿಪೋ ಮಂಗಳೂರು ಘಟಕ ನಿಯಂತ್ರಣಾಧಿಕಾರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ಸಚಿನ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಕ್ಕೆ ಪತ್ರ

ಬಿ.ಸಿ.ರೋಡು - ಕಲ್ಲಡ್ಕ - ಕರಿಂಗಾಣ ಬಸ್ ಸಂಚಾರವನ್ನು ಕರೊನಾ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಸಮಿತಿ ಮನವಿಗೆ ಸ್ಪಂದಿಸಿ ಪುನಃ ಪ್ರಾರಂಭಿಸಲಾಗಿದೆ. ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮಕೈಗೊಳ್ಳುವಂತೆ ಮತ್ತು ವೈದ್ಯಕೀಯ ಕಾರಣಕ್ಕಾಗಿ ವಿತರಿಸುತ್ತಿದ್ದ ಪಡಿತರ ಚೀಟಿ ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು.

13ರಂದು ಆರೋಗ್ಯ ತಪಾಸಣಾ ಶಿಬಿರ

ಬಿ.ಸಿ.ರೋಡು ಡಾ.ಬಿ.ಆರ್.ಅಂಬೆಡ್ಕರ್ ಭವನದಲ್ಲಿ ಜುಲೈ 13ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಮಿತಿ ವತಿಯಿಂದ ಉಚಿತ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ತಿಳಿಸಿದ್ದಾರೆ.