ಜಿಲ್ಲೆ

ಗ್ಯಾರಂಟಿ ಜಾರಿ ಬಳಿಕ ಪ್ರತಿಪಕ್ಷಗಳ ಅಡ್ರೆಸ್ ಇರುವುದಿಲ್ಲ

ಹರ್ಷ ನ.ಪುರೋಹಿತ

ಚಿತ್ರದುರ್ಗ: ರಾಜ್ಯದಲ್ಲಿ ಜೂ.1ರಿಂದ 5 ಗ್ಯಾರಂಟಿಗಳ ಜಾರಿ ನಿಶ್ಚಿತ. ಬಳಿಕ ಬಿಜೆಪಿ ಸೇರಿ ಪ್ರತಿಪಕ್ಷಗಳ ಅಡ್ರೆಸ್ ಇರುವುದಿಲ್ಲ ಎಂದು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ನಗರದ ಭೋವಿ ಗುರುಪೀಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಅಂದರೆ ಗ್ಯಾರಂಟಿ-ಬಿಜೆಪಿ ಎಂದರೆ ಬೋಗಸ್, ಶೇ.40 ಭ್ರಷ್ಟಾಚಾರ ಎಂದು ವಿಮರ್ಶಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ದಿನಗಳಾಗಿವೆ. ಪ್ರತಿಪಕ್ಷಗಳಿಗೆ ಯಾಕೆ ಅವಸರ ಎಂದು ಪ್ರಶ್ನಿಸಿದರು.

ಮಗು ಜನಿಸುತ್ತಿದ್ದಂತೆ ನಡೆಯದು. ಯಾವುದೇ ಯೋಜನೆಗಳಿಗೆ ಮಾರ್ಗಸೂಚಿ ಇರುತ್ತದೆ.

ಜಾರಿ ಬಳಿಕ ಪ್ರಶ್ನಿಸಬಹುದು

ಗ್ಯಾರಂಟಿಗಳಲ್ಲಿ ಬದಲಾವಣೆ ಮಾಡಿಲ್ಲ. ಜಾರಿ ಬಳಿಕ ಈ ಕುರಿತು ಪ್ರಶ್ನಿಸಬಹುದು. ಭರವಸೆಗಳ ಅನುಷ್ಠಾನದ ಬಗ್ಗೆ ಕಾಂಗ್ರೆಸ್ಸಿಗೆ ಬದ್ಧತೆ ಇದೆ ಎಂದರು.

ವಿದೇಶದಲ್ಲಿರುವ ಕಪ್ಪು ಹಣದಿಂದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಿಲ್ಲ. ಯಾಕೆ ಕಪ್ಪು ಹಣ ತರಲಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಕೊಡಲಿಲ್ಲ.

ಈ ಕುರಿತು ಎಂದಾದರೂ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದಾರೆಯೇ ಎಂದು ಭಾಜಪ ನಾಯಕರಿಗೆ ತಿರುಗೇಟು ನೀಡಿದರು.

ವಿಶೇಷವಾಗಿ ಅವರು ಯಾಕೆ ಲೋಕಸಭೆಯಲ್ಲಿ ಪ್ರಸ್ತಾಪಿಸಬಾರದೆಂದು ಸಂಸದ ಪ್ರತಾಪ್ ಸಿಂಹ ಅವರನ್ನು ಕೆಣಕಿದರು.

ತಾಕತ್ ಇದ್ದರೆ ಉದ್ಯೋಗದ ಬಗ್ಗೆ ಮಾತನಾಡುವಂತೆ ಸವಾಲು

ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆಗಳು ಎಲ್ಲವೂ ಠುಸ್ ಆಗಿವೆ. ತಾಕತ್ ಇದ್ದರೆ ಉದ್ಯೋಗದ ಬಗ್ಗೆ ಮಾತನಾಡುವಂತೆ ರವಿಗೆ ಸವಾಲು ಹಾಕಿದರು.

ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಸಿಎಂ ಆಗಿರುತ್ತಾರೆಯೇ ಎಂಬ ಶಾಸಕ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರ‌್ನಾಲ್ಕು ಜನ ಸಿಎಂ ಆದಂತೆ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಾವಧಿ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ.

ಬಿಜೆಪಿಯವರಿಗೆ ಆಡಳಿತ ನಡೆಸಿ ಗೊತ್ತಿಲ್ಲ, ನಡೆಸಿದರೂ 40 ಪರ್ಸೆಂಟ್ ಎಂದು ವ್ಯಂಗ್ಯವಾಡಿದರು.

ಸತತ ಸುಳ್ಳುಗಳನ್ನು ಹೇಳುವ ಬಿಜೆಪಿಯ ಬಗ್ಗೆ ರಾಜ್ಯದ ಜನರು ಫಲಿತಾಂಶದ ಮೂಲಕ ಉತ್ತರ ನೀಡಿದ್ದಾರೆ.

ಬರುವ ದಿನಗಳಲ್ಲಿ ದೇಶದ ಜನರಿಗೂ ಗೊತ್ತಾಗಲಿದೆ ಎಂದ ಸಚಿವರು, ನನಗೆ ನೀಡಿರುವ ಖಾತೆ ಕುರಿತು ತೃಪ್ತಿ ಇದೆ ಎಂದರು.

ಭೋವಿ ಸಮಾಜ ಹಾಗೂ ಮೀಸಲಾತಿ ಸಂರಕ್ಷಣಾ ಒಕ್ಕೂಟ ಎಲ್ಲ ಉಪ ಸಮುದಾಯಗಳಿಗೆ ಶಕ್ತಿ ತುಂಬುವಂಥ ರೀತಿಯಲ್ಲಿ ಸಿದ್ಧರಾಮಯ್ಯ ಸಂಪುಟಕ್ಕೆ ಶಿವರಾಜ್ ತಂಗಡಗಿ ಸೇರ್ಪಡೆ ಆಗಿದ್ದಾರೆ. ನಮಗೆ ಕೊಟ್ಟಂಥ ಆಶ್ವಾಸನೆ ಈಡೇರಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ, ಚಿತ್ರದುರ್ಗ