ಶಿಕಾರಿಪುರ: ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಏನು ಆಶ್ವಾಸನೆ ನೀಡಿತ್ತೋ ಅದಕ್ಕೆ ಬದ್ಧವಾಗಿ ಐದೂ ಗ್ಯಾರಂಟಿಗಳನ್ನು ಸಮರ್ಪಕವಾಗಿ ಈಡೇರಿಸಿದೆ, ಇದಕ್ಕೆ ಪೂರಕವಾಗಿ ಶಿಕಾರಿಪುರದಲ್ಲಿ ಫೆ.18ರಂದು ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಹೇಳಿದರು.
ಆಡಳಿತಸೌಧದ ಮುಂಭಾಗದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವ ವಹಿಸುವರು. ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳು ಆಗಮಿಸುವರು. ಅಗತ್ಯ ದಾಖಲೆಯ ಕೊರತೆ ಮತ್ತು ಕಾನೂನಿನ ಸಮಸ್ಯೆಯಿಂದ ಯೋಜನೆಯ ಫಲ ಸಿಗದೆ ಇರುವವರ ಸಮಸ್ಯೆಯನ್ನು ಸ್ಥಳಿಯವಾಗಿ ಬಗೆಹರಿಸಲಾಗುವುದು. ಫಲಾನುಭವಿಗಳು ಈ ಸಮಾವೇಶಕ್ಕೆ ಆಗಮಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐದು ಗ್ಯಾರಂಟಿಗಳಿಂದ ಪಕ್ಷದ ವರ್ಚಸ್ಸು ದಿನೇದಿನೆ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್ ಕಡೆಗೆ ಜನ ಮುಖ ಮಾಡುತ್ತಿರುವುದು ಬಿಜೆಪಿಯವರಿಗೆ ಸಹಿಸದಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ, ಶಿಕಾರಿಪುರ ತಾಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಶೇಕಡ 99 ಅನುಷ್ಠಾನಗೊಂಡಿವೆ. ದಾಖಲೆ ಮತ್ತು ಕಾನೂನಿನ ತೊಡಕಿನಿಂದ ಬಾಕಿ ಉಳಿದವುಗಳನ್ನು ಸಮಾವೇಶದಲ್ಲಿ ಸ್ಥಳದಲ್ಲಿಯೇ ಬಹುತೇಕ ಇತ್ಯರ್ಥಪಡಿಸಲಾಗುವುದು. ತಾಲೂಕಿನಲ್ಲಿ 37,744 ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 53,708 ಫಲಾನುಭವಿಗಳಿಗೆ 10,74,16,000 ರೂ. ಹಣ ಪ್ರತಿ ತಿಂಗಳೂ ಪಾವತಿಯಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ಐದೂವರೆ ಕೋಟಿ ರೂ. ಜಮಾ ಆಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ನಗರದ ಮಹದೇವಪ್ಪ, ನಾಗರಾಜ ಗೌಡ, ಕವಲಿ ಗಂಗಾಧರಪ್ಪ, ತಿಮ್ಮಣ್ಣ, ಪ್ರಕಾಶ್, ಕಲ್ಮನೆ ಸುರೇಶ್, ಸೌಭಾಗ್ಯಮ್ಮ, ಶಕುಂತಲಮ್ಮ, ಜಯಶ್ರೀ ಹೇಮರಾಜ್, ಭಂಡಾರಿ ಮಾಲತೇಶ್ ಇತರರಿದ್ದರು.