ಇಂಡವಾಳು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ 10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದರು. ಕೆ.ಮಹದೇವ, ಟಿ.ಎಸ್.ಪ್ರಶಾಂತ್ ಬಾಬು, ನಂದಿನಿ ರಾಜೇಂದ್ರ, ಕುಪ್ಯಾ ಭಾಗ್ಯಮ್ಮ, ಮಸ್ರೂರ್ ಅಹಮ್ಮದ್, ಸಿದ್ದರಾಜು, ತುಂಬಲ ಅಂದಾನಿ, ನಾಗರಾಜು, ಹಾಳೇಗೌಡ ಇದ್ದರು. 
ಜಿಲ್ಲೆ

ಗ್ಯಾರಂಟಿಯಿಂದ ಗ್ರಾಮೀಣ ಜನರಿಗೆ ಅನುಕೂಲ

ಲೋಕೇಶ್ ಮನು. ಡಿ

ತಿ.ನರಸೀಪುರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಸೇರಿದಂತೆ ಶಾಸಕರ ಕ್ಷೇತ್ರಾಭಿವೃದ್ಧಿಗೂ ಅನುದಾನಗಳನ್ನು ಮೀಸಲಿಟ್ಟಿದ್ದು, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಇಂಡವಾಳು ಗ್ರಾಮದಲ್ಲಿ ಮಂಗಳವಾರ ವಿಶೇಷ ಘಟಕ(ಎಸ್ಸಿಪಿ/ಟಿಎಸ್ಪಿ) ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ 10.70 ಕೋಟಿ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ, ರಸ್ತೆ ಮತ್ತು ಹೈಮಾಸ್ಟ್ ದೀಪ ಅಳವಡಿಕೆ, ಶಾಲಾ ಕೊಠಡಿ ನಿರ್ಮಾಣ, ಸಿಸಿ ರಸ್ತೆ ಮತ್ತು ಚರಂಡಿ, ಸೇತುವೆ ನಿರ್ಮಾಣ ಹಾಗೂ ದೇಗುಲ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. 2024ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 518 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ದಿನ ಕೂಡ 10.70 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ವಿಪಕ್ಷಗಳು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ, ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ ಎಂದು ಆರೋಪ ಮಾಡುತ್ತಿವೆ. ಇದೆಲ್ಲ ಸುಳ್ಳು. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56,000 ಕೋಟಿ ರೂ. ವ್ಯಯಿಸುತ್ತಿದೆ. ಜತೆಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿಗೆ ಅವಶ್ಯ ಇರುವ ಅನುದಾನಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ. ಮುಖ್ಯಮಂತ್ರಿಗಳೇ ವಿತ್ತ ಸಚಿವರಾಗಿರುವುದರಿಂದ ರಾಜ್ಯದ ಆರ್ಥಿಕ ಸಮತೋಲನವನ್ನು ಅವರು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಯು ಆರ್ಥಿಕವಾಗಿ ತಳಮಟ್ಟದಲ್ಲಿರುವ ಜನರಿಗಾಗಿ ಜಾರಿಯಾಗಿರುವ ಬಹುಪಯುಕ್ತ ಯೋಜನೆ. ಇದರಿಂದ ರಾಜ್ಯದ ಗ್ರಾಮೀಣ ಪ್ರದೇಶದ ಜನರಲ್ಲದೆ ನಗರ ಪ್ರದೇಶದ ಜನರು ಕೂಡ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತಿದೆ. ಈ ಯೋಜನೆ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ. ಆದರೆ ರಾಜ್ಯದ ವಿರೋಧ ಪಕ್ಷಗಳು ಮಾತ್ರ ಸಲ್ಲದ ಆರೋಪ ಮಾಡುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಕಿಡಿಕಾರಿದರು.

ಇದೇ ವೇಳೆ ಶಾಲಾ ಕೊಳವೆ ಬಾವಿ ಮತ್ತು ಈಗಾಗಲೇ ನಿರ್ಮಾಣಗೊಂಡಿರುವ ಚರಂಡಿಗಳು ಮತ್ತು ತುಂಬಲ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಿರುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಗ್ರಾ.ಪಂ. ಅಧ್ಯಕ್ಷರಾದ ನಂದಿನಿ ರಾಜೇಂದ್ರ, ಹುಣಸೂರು ಸಿ.ನಿಂಗರಾಜು, ರಾಮನಂಜಯ್ಯ, ಉಪಾಧ್ಯಕ್ಷ ಸಿದ್ದರಾಜು, ಜಿ.ಪಂ ಮಾಜಿ ಸದಸ್ಯರಾ ಕೆ.ಮಹದೇವು, ಇಂಡವಾಳು ನಾಗರಾಜು, ಬಸವರಾಜು, ತಾ.ಪಂ ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ಪಿಕಾರ್ಡ್ ಮಾಜಿ ಅಧ್ಯಕ್ಷರಾದ ಎಂ.ಮಹದೇವಣ್ಣ, ಟಿ.ಎಸ್.ಪ್ರಶಾಂತ್ ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಮನ್ನೆಹುಂಡಿ ಮಹೇಶ್, ಮ.ಮ.ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕಿ ಕುಪ್ಯಾ ಭಾಗ್ಯಮ್ಮ, ದಸಂಸ ಜಿಲ್ಲಾ ಸಂಚಾಲಕ ಆಳಗೂಡು ಶಿವಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ್, ಮಾಜಿ ಪುರಸಭಾ ಅಧ್ಯಕ್ಷ ಎನ್.ಸೋಮಣ್ಣ, ಮದನ್ ರಾಜು, ಸದಸ್ಯ ತುಂಬಲ ಸಿ.ಪ್ರಕಾಶ್, ಮುಖಂಡರಾದ ಮಸ್ರೂರ್ ಅಹಮ್ಮದ್, ಹಾಳೇಗೌಡ, ಸಗೀರ್ ಅಹಮ್ಮದ್, ಆರ್.ಪಿ ಹುಂಡಿ ನಾಗರಾಜು, ರಂಗಸಮುದ್ರ ಮಂಜುನಾಥ್, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ, ಬಿಇಒ ಎಸ್.ಸಿ.ಶಿವಮೂರ್ತಿ, ಎಇಇಗಳಾದ ಕೆ.ವಿ.ವೀರೇಶ್, ಎಸ್.ಅರ್ಚನಾ ಬಾವಿಕಟ್ಟಿ, ಪಿ.ಎನ್.ಚರಿತಾ, ನೀರಾವರಿ ಎಇ ಮಂಜುನಾಥ್, ದಿಲೀಪ್ ಕುಮಾರ್, ಬಿಸಿಎಂ ವಿಸ್ತರಣಾಧಿಕಾರಿ ಎಂ.ರಾಜಣ್ಣ, ನಿರ್ಮಿತ ಕೇಂದ್ರದ ಕಿರಿಯ ಇಂಜಿನಿಯರ್ ಮಂಜುನಾಥ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.