* ರೇಷ್ಮೆ ಕೃಷಿಕರಿಗೆ ವಿತರಣೆಯಾಗದ ಪರಿಕರಗಳು
* ಎರಡು ವರ್ಷದಿಂದ ವಿತರಣೆಯಾಗದೆ ತೊಂದರೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ಸರ್ಕಾರ ಗ್ಯಾರಂಟಿ ಗುಂಗಲ್ಲಿ ಮುಳುಗಿದೆ. ಪಂಚ ಗ್ಯಾರಂಟಿಗಳನ್ನು ತಲುಪಿಸುವ ನೆಪದಲ್ಲಿ ರೈತರು ಸೇರಿ ಇತರ ಸಮುದಾಯಗಳಿಗೆ ಬರುತ್ತಿದ್ದ ಅನುದಾನಕ್ಕೆ ಕತ್ತರಿ ಬಿದ್ದಿದೆ. ಇದಕ್ಕೆ ಸಾ ಎನ್ನುವಂತೆ ಕಳೆದ ಎರಡು ವರ್ಷಗಳಿಂದಲೂ ರಾಜ್ಯದ ರೇಷ್ಮೆ ಕೃಷಿಕರಿಗೆ ನೀಡಲಾಗುತ್ತಿದ್ದ ಪರಿಕರಗಳು ಟೆಂಡರ್ ಆಗಿಲ್ಲ ಎನ್ನುವ ಕಾರಣಕ್ಕೆ ವಿತರಣೆ ಮಾಡಿಲ್ಲ. ಇದರಿಂದಾಗಿ ರೈತರು ತೊಂದರೆ ಪಡುವಂತೆ ಆಗಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ, ಮೀನುಗಾರಿಕೆ ಇಲಾಖೆಗಳಲ್ಲಿ ಆಯಾ ಇಲಾಖೆಗೆ ತಕ್ಕಂತೆ ರೈತರು ಬಳಕೆ ಮಾಡುವ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ಇಲ್ಲವೇ ಖರೀದಿ ಮಾಡುವ ಪರಿಕರಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದೇ ರೀತಿ ರೇಷ್ಮೆ ಕೃಷಿ ಇಲಾಖೆಯಲ್ಲಿಯೂ ಪ್ಲಾಸ್ಟಿಕ್ ಚಂದ್ರಿಕೆ, ಬ್ರಷ್ ಕಟರ್, ಸೋಂಕು ನಿವಾರಕ ಔಷಧ ಸಿಂಪಡಣೆ ಯಂತ್ರ ಸೇರಿ ಇತರ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿತ್ತು. ಇದರ ಲಾನುಭವಿಗಳು ಹೆಚ್ಚಾಗಿ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ ಆಗಿದ್ದಾರೆ. ಆದರೆ, ಎರಡು ವರ್ಷಗಳಿಂದ ವಿತರಣೆಗೆ ಕೊಕ್ಕೆ ಬಿದ್ದಿದೆ.
ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್ ಕಳೆಯತ್ತಿದ್ದಂತೆ ಇಲಾಖೆಯೇ ಪ್ರಕಟಣೆ ಹೊರಡಿಸಿ ರೈತರಿಗೆ ಪರಿಕರ ವಿತರಣೆ ಮಾಡುತ್ತಿತ್ತು. ಅರ್ಹ ಮತ್ತು ಅಗತ್ಯ ಇರುವ ರೈತರು ಪರಿಕರಗಳನ್ನು ರಿಯಾಯಿತಿ ಬೆಲೆಗೆ ಖರೀದಿ ಮಾಡುತ್ತಿದ್ದರು. ಆದರೆ, ಎರಡು ವರ್ಷಗಳಿಂದ ಈ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ರೈತರು ಜಿಲ್ಲೆ ಮತ್ತು ತಾಲೂಕುಮಟ್ಟದ ಅಧಿಕಾರಿಗಳನ್ನು ಕೇಳಿದರೆ ಅವರು ರಾಜ್ಯ ಕಚೇರಿ ಕಡೆಗೆ ಬೊಟ್ಟು ಮಾಡುತ್ತಾರೆ. ಅಲ್ಲಿಂದಲೇ ಟೆಂಡರ್ ಆಗಬೇಕು. ಇನ್ನು ಆಗಿಲ್ಲ, ಆದ ತಕ್ಷಣ ಕೊಡುತ್ತೇವೆ ಎನ್ನುವ ಉತ್ತರ ನೀಡುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ದಣ ಭಾಗದ ಜಿಲ್ಲೆಗಳಾದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ರೇಷ್ಮೆ ಬೆಳೆಯಲಾಗುತ್ತದೆ. ಈಗ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಂತ ಹಂತವಾಗಿ ರೇಷ್ಮೆ ಕೃಷಿಯತ್ತ ಮುಖ ಮಾಡಿವೆ. ಆದರೆ, ರಿಯಾಯಿತಿ ದರದಲ್ಲಿ ಪರಿಕರಗಳನ್ನು ನೀಡುತ್ತಿದ್ದ ಇಲಾಖೆ ಏಕಾಏಕಿ ನಿಲ್ಲಿಸಿರುವುದು ರೈತರ ಆರ್ಥಿಕ ಹೊರೆ ಹೆಚ್ಚಿಸಿದೆ. ನಾವೇ ಖರೀದಿ ಮಾಡುತ್ತೇವೆ, ನಮಗೆ ಸಬ್ಸಿಡಿ ಕೊಡಿ ಎಂದು ಕೇಳಿಕೊಂಡರೂ ಅಧಿಕಾರಿಗಳು, ಇದಕ್ಕೆ ಅವಕಾಶ ಇಲ್ಲ ಎನ್ನುತ್ತಿದ್ದಾರೆ.
ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯವೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಸರಾಸರಿ ಶೇ.40 ಪಾಲು ರಾಜ್ಯದ್ದೇ ಆಗಿದೆ. ದೇಶದಲ್ಲಿ ಒಟ್ಟಾರೆಯಾಗಿ 2.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ಇದರಲ್ಲಿ ರಾಜ್ಯದಲ್ಲಿಯೇ 1.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತದೆ. ನಂತರದ ಸ್ಥಾನ ಕ್ರಮವಾಗಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಹಾರಾಷ್ಟ್ರ ಹೊಂದಿವೆ. ಇನ್ನು ರಾಜ್ಯದಿಂದ ಪ್ರತಿ ವರ್ಷ ಸರಾಸರಿ 12 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆ ರಾಜ್ಯದಿಂದಲೇ ಆಗುತ್ತಿದೆ.
ಪರಿಕರಗಳಿಗೆ ಮಾತ್ರವಲ್ಲ ಕಳೆದ ಒಂದು ವರ್ಷದಿಂದ ರೇಷ್ಮೆ ಹುಳು ಸಾಕಾಣಿಕಾ ಮನೆಗಳಿಗೂ ಸಹಾಯ ಧನ ನೀಡುವಲ್ಲಿ ರೇಷ್ಮೆ ಇಲಾಖೆ ವಿಲವಾಗಿದೆ. ರಾಮನಗರ ಜಿಲ್ಲೆ ಒಂದರಿಂದಲೇ ಸುಮಾರು 300 ಮನೆಗಳಿಗೆ ಸಹಾಯಧನ ಬಿಡುಗಡೆ ಮಾಡಬೇಕು. ಆದರೆ, ಅನುದಾನದ ಕೊರತೆ ನೆಪ ಹೇಳಿಕೊಂಡು ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.
ರೇಷ್ಮೆ ರಾಜ್ಯದ ಸುಮಾರು 12 ಲಕ್ಷ ಕುಟುಂಬಗಳಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಕಲ್ಪಿಸಿದೆ. ಈ ಕ್ಷೇತ್ರವನ್ನು ರ್ನಿಲಕ್ಷ್ಯ ಮಾಡಿದರೆ ಖಂಡಿತವಾಗಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಸರ್ಕಾರ ಕೂಡಲೇ ರೇಷ್ಮೆ ಕೃಷಿಕರಿಗೆ ನೀಡಬೇಕಾದ ನೆರವಿನ ಬಗ್ಗೆ ಗಂಭೀರವಾಗಿ ಗಮನ ಹರಿಸಲಿ, ರೇಷ್ಮೆ ಸಚಿವರು ಈ ಇಲಾಖೆ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ.
ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಟೆಂಡರ್ ಪ್ರಕ್ರಿಯೆ ಆದ ನಂತರ ರೈತರಿಗೆ ಪರಿಕರಗಳನ್ನು ವಿತರಣೆ ಮಾಡಲಾಗುತ್ತದೆ.> ಬಸವರಾಜು ಉಪ ನಿರ್ದೇಶಕರು, ರೇಷ್ಮೆ ಇಲಾಖೆ, ರಾಮನಗರಕಳೆದ ಎರಡು ವರ್ಷಗಳಿಂದಲೂ ರೇಷ್ಮೆ ಕೃಷಿಕರಿಗೆ ಪರಿಕರಗಳನ್ನು ವಿತರಣೆ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಆಗಿಲ್ಲ ಎನ್ನುವ ಉತ್ತರ ನೀಡುತ್ತಾರೆ. ನಾವೇ ಖರೀದಿ ಮಾಡುತ್ತೇವೆ ಅನುದಾನ ಕೊಡಿ ಎಂದರೆ ಅದನ್ನೂ ಕೊಡುತ್ತಿಲ್ಲ. > ಕೆ.ರವಿ, ಕಾರ್ಯದರ್ಶಿ, ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿ