ಜಿಲ್ಲೆ

ಗ್ಯಾರಂಟಿಯಿಂದ ಎಂಡೋ ಸಂತ್ರಸ್ತರಿಗೆ ಅನುಕೂಲ - ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿಕೆ

Mangaluru - Nishantha Narayana

ವಿಟ್ಲ: ಸಮಾಜಕ್ಕೆ ಬೆಳಕು ನೀಡುವ ಕಾರ್ಯ ಗ್ಯಾರಂಟಿ ಯೋಜನೆಯ ಮೂಲಕ ನಡೆಯುತ್ತಿದೆ. ಸರ್ಕಾರವನ್ನು ತೆಗಳಿದವರೂ ಇಂದು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಮಹಿಳೆಯರಿಗೆ ಬಲ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವಾಗಿದೆ. ಅಂಗವಿಕಲರ ತಾಯಂದಿರಿಗೆ ಒಂದು ಸಾವಿರ ಹೆಚ್ಚುವರಿ ನೀಡುವ ಯೋಜನೆ ಜಾರಿಯಾಗುವುದರಿಂದ ಎಂಡೋಸಲಾನ್ ಸಂತ್ರಸ್ತರಿಗೆ ಬಹಳಷ್ಟು ಸಹಾಯವಾಗಲಿದೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

ವಿಟ್ಲ ಮಾದರಿ ಶಾಲೆಯಲ್ಲಿ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ನಡೆದ ನೋಂದಣಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೆ ಎಸ್ ಆರ್ ಟಿ ಸಿ, ಆಹಾರ ಇಲಾಖೆ, ಮೆಸ್ಕಾಂ, ಯುವಜನ ಕ್ರೀಡಾ ಇಲಾಖೆಯ ಅಽಕಾರಿಗಳು ಅರ್ಜಿ ವಿಲೇವಾರಿ ನಡೆಸಿದರು. ಐದು ಗ್ರಾಮಗಳ ಫಲಾನುಭವಿಗಳಿಗೆ ಶಿಬಿರದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಅಧ್ಯಕ್ಷತೆಯನ್ನು ಗ್ಯಾರಂಟಿ ಸಮಿತಿಯ ಬಂಟ್ವಾಳ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ವಹಿಸಿದ್ದರು.

ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್, ಗ್ಯಾರಂಟಿ ಸಮಿತಿ ಪುತ್ತೂರು ಅಧ್ಯಕ್ಷ ಉಮಾನಾಥ ಶೆಟ್ಟಿ, ಬ್ಲಾಕ್ ಮಾಜಿ ಅಧ್ಯಕ್ಷ ಡಾ. ರಾಜಾರಾಮ, ಪಟ್ಟಣ ಪಂಚಾಯಿತಿಯ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಕರುಣಾಕರ, ಬಬಿತಾ, ಲತಾ ಅಶೋಕ್, ಪದ್ಮಿನಿ, ರಾಮಣ್ಣ ಪಿಲಿಂಜ, ಸೂರಜ್ ಮದಕ, ಸತೀಶ್, ಚಂದ್ರಶೇಖರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಸ್ವಾಗತಿಸಿದರು. ಪಟ್ಟಣ ಪಂಚಾಯಿತಿಯ ನಾಮನಿರ್ದೇಶಿತ ಸದಸ್ಯ ಮಹಮ್ಮದ್ ಇಕ್ಬಾಲ್ ವಂದಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ವಿ.ಕೆ.ಎಂ.ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.