ವಿಜಯಪುರ: ನಿರಂತರ ಮಳೆಯಿಂದಾಗಿ ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಮತ್ತು ವಿದ್ಯಾರ್ಥಿಗಳ ಸಂಚಾರ ತೊಂದರೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಹಾನಿಕಾರಕರ ಪರಿಣಾಮ ಬೀರುವ ಪರಿಸ್ಥಿತಿ ಉಂಟಾಗಿದೆ. ಮಳೆಯಿಂದಾಗಿ ಜ್ವರ, ಶೀತ, ಕೆಮ್ಮು ಹೀಗೆ ಹಲವಾರು ಆರೋಗ್ಯ ತೊಂದರೆಗಳು ಕಂಡು ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಜಿಲ್ಲೆಯ ಅನೇಕ ಶಾಲಾ ಕಟ್ಟಡಗಳು ಮಳೆಯಿಂದ ಶಿಥಿಲಗೊಂಡಿದ್ದು, ತರಗತಿ ಕೊಠಡಿಗಳು ತೇವಗೊಂಡಿವೆ. ಇನ್ನೊಂದೆಡೆ, ನಿರಂತರ ಮಳೆಯಿಂದ ಸಾರಿಗೆ ವ್ಯವಸ್ಥೆ ಅಸ್ಥವ್ಯಸ್ತಗೊಂಡಿದ್ದು ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಹಾಗೂ ಮನೆಗೆ ಮರಳಲು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಜಿಲ್ಲೆ ಎಲ್ಲ ಶಾಲೆ-ಕಾಲೇಜ್‌ಗಳಿಗೆ ರಜೆ ಘೋಷಿಸಬೇಕೆಂದು ಮನವಿ ಮಾಡಿದರು.
ಸಂಘದ ಪ್ರಮುಖರಾದ ಜುಬೇರ ಕೆರೂರ, ಶಿವರಾಜ ಬಿರಾದಾರ, ರಾಜಶೇಖರ ದೈವಾಡಿ ಮತ್ತಿತರರಿದ್ದರು.