ಜಿಲ್ಲೆ

ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪರಿಶೀಲಿಸಿದ ಶಾಸಕ ಜಿ.ಟಿ. ದೇವೇಗೌಡ

ಸದೇಶ್ ಕಾರ್ಮಾಡ್

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳು ಜನರಿಗೆ ನಿವೇಶನಗಳ ಖಾತೆ ನೀಡಲು ಆಸಕ್ತಿ ತೋರುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಿಗೆ ಮುಡಾ ಅನುಮೋದಿತ ಖಾಸಗಿ ಬಡಾವಣೆಗಳು ಹಸ್ತಾಂತರವಾದ ನಂತರ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಖಾತೆ ಮಾಡಿಕೊಡುವುದಕ್ಕೆ ಮಾತ್ರ ಆದ್ಯತೆ ನೀಡುತ್ತಿರುವುದು ಸರಿಯಲ್ಲ. ಇದರ ಜತೆಗೆ ಜನರಿಗೆ ಕುಡಿಯುವ ನೀರು ,ಸ್ವಚ್ಛತೆ, ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಡೆಗೂ ಗಮನ ಹರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರಿಗೆ ಸಮಸ್ಯೆಗಳಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜನರು ನಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಅಸಮಾಧಾನ ತೋರ್ಪಡಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ಕೂಡಲೇ ಎಸ್‌ಎಫ್‌ಸಿ, ಪ್ರಸಕ್ತ ವರ್ಷದ ಆದಾಯ ಸಂಗ್ರಹಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿ ಕೌನ್ಸಿಲ್ ಸಭೆ ಕರೆದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಜೂನ್ ತಿಂಗಳಲ್ಲಿ ಕಾಮಗಾರಿಗಳಿಗೆ ಅನುಮೋದನೆ ಪಡೆಯಬೇಕಾಗಿತ್ತಾದರೂ ಇದುವರೆಗೆ ಪಡೆಯದೆ ಇರುವುದು ಸರಿಯಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕಪಿಲಾ ನದಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು. ಈ ಬಗ್ಗೆ ಶ್ರೀರಾಂಪುರ, ಬೋಗಾದಿ ಪಟ್ಟಣ ಪಂಚಾಯಿತಿ ಯೋಜನೆ ರೂಪಿಸಬೇಕು. ರಮ್ಮನಹಳ್ಳಿ ಪಟ್ಟ ಪಂಚಾಯಿತಿಯಿಂದ ಜರ್ಮನ್‌ಪ್ರೆಸ್ ಮೂಲಕ ವಸಂತನಗರ, ಸರ್ದಾರ್ ವಲ್ಲಭಬಾಯ್ ಪಟೇಲ್ ನಗರಕ್ಕೆ ನೀರು ಪೂರೈಸಲಾಗುವುದು ಎಂದರು.

ನಗರ ಮತ್ತು ಹೊರವಲಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಯಾಯ ಸ್ಥಳೀಯ ಸಂಸ್ಥೆಗಳಿಗೆ ಇನ್ನೆರಡು ದಿನಗಳಲ್ಲಿ ಹಸ್ತಾಂತರಿಸಬೇಕು ಎಂದು ನಿರ್ದೇಶನ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಯುಕೇಶ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ಮಾಣ ಮಾಡಿದ ಶುದ್ಧ ಕುಡಿಯು ನೀರಿನ ಘಟಕಗಳ ನಿರ್ವಹಣೆ ಅವಧಿಯು ಮುಗಿದಿದ್ದು, ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳ ಜಾಗಗಳನ್ನು ಗುರುತಿಸಿ ಹದ್ದುಬಸ್ತಿನಲ್ಲಿಡಬೇಕು. ಅದೇ ರೀತಿ ಸರ್ಕಾರಿ ಭೂಮಿ ಗುರುತಿಸಿ ಮೀಸಲಿಡಬೇಕು. ಮುಂದೆ ಶಾಲಾ,ಕಾಲೇಜು ನಿರ್ಮಾಣ, ಸ್ಮಶಾನ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು. ಹಳ್ಳಿಗಳಲ್ಲಿರುವ ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ವಾರಕ್ಕೊಮ್ಮೆ ಕಂದಾಯ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸರ್ಕಾರಿ ಜಾಗವನ್ನು ಗುರುತಿಸಿ ಖಾತೆ ಮಾಡಿಸಬೇಕು. ಕೆಲವು ಕಡೆಗಳಲ್ಲಿ ಗೋಮಾಳದಲ್ಲಿ ಉಳುಮೆ ಮಾಡಲಾಗುತ್ತಿದೆ .ಅಂತಹವರಿಗೆ ಹಕ್ಕುಪತ್ರ ನೀಡದ ಸನ್ನಿವೇಶವಿದ್ದು, ಅದಕ್ಕಾಗಿ ಎಡಿಎಲ್‌ಆರ್, ಡಿಡಿಎಲ್‌ಆರ್‌ಗಳು ಗೋಮಾಳ ಭೂಮಿಯನ್ನು ಸರ್ವೆ ಮಾಡಿ ದಾಖಲೆಗಳನ್ನು ಸಿದ್ಧಪಡಿಸಬೇಕು ಎಂದ ಸಲಹೆ ನೀಡಿದರು.

ಬಂಡಿಪಾಳ್ಯದ ಹೊಸಹುಂಡಿ ಮಾರ್ಗದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಎಪಿಎಂಸಿ ಅಧಿಕಾರಿಗಳು ಸಹ ಸ್ವಚ್ಛತೆ ಕಾಪಾಡುವ ವಿಚಾರದಲ್ಲಿ ಸಹಕಾರ ನೀಡಬೇಕು. ತರಕಾರಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯಲು ಅವಕಾಶ ನೀಡಬಾರದು. ಮುಖ್ಯರಸ್ತೆಗಳಲ್ಲಿ ಇರುವ ಬೀದಿ ದೀಪಗಳು ಕೆಟ್ಟು ಹೋಗಿದ್ದರೆ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉದ್ಯಾನಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯಬೇಕು. ಅಲ್ಲಿಯವರೆಗೆ ಉದ್ಯಾನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಹೂಟಗಳ್ಳಿ ನಗರಸಭೆ ಹಾಗೂ 4 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಉದ್ಯಾನವನಗಳಿದ್ದು, ಅವುಗಳನ್ನು ಹಂತ ಹಂತವಾಗಿ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿಪಡಿಸಬೇಕಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸಲು ಪಟ್ಟಿ ತಯಾರಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಗೆ ಗೈರು ಹಾಜರಾದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್. ರಕ್ಷಿತ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸವಿತಾ, ಕಾರ್ಯನಿರ್ವಹಣಾಧಿಕಾರಿ ಕೃಷ್ಣ, ತಹಸಿಲ್ದಾರ್ ಮಹೇಶ್ ಕುಮಾರ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧೀಕ್ಷಕ ಇಂಜಿನಿಯರ್ ಸುನಿಲ್ ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ವಿ.ಪ್ರಿಯದರ್ಶಿನಿ ಇದ್ದರು.

ಶುದ್ಧ ನೀರು ಪೂರೈಕೆ ಮಾಡಿ

ಹಳ್ಳಿಗಳಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಿ ಜನರಿಗೆ ಶುದ್ಧ ನೀರನ್ನು ಪೂರೈಸಬೇಕು. ಕಳೆದ ವರ್ಷ ಕೆ.ಸಾಲುಂಡಿ ಗ್ರಾಮದಲ್ಲಿ ಉಂಟಾಗಿದ್ದ ಕಲುಷಿತ ನೀರು ಸೇವನೆ ಪ್ರಕರಣ ಮತ್ತೆ ಮರುಕಳಿಸದಂತೆ ಗಮನಹರಿಸಬೇಕು. ಹಾಗಾಗಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಅಧಿಕಾರಿಗಳ ಆದ್ಯತೆ ಆಗಬೇಕು. ಈ ವಿಚಾರದಲ್ಲಿ ಮೈಮರೆತರೆ ಮೈ ಮರೆತರೆ ಸುಮ್ಮನಿರುವುದಿಲ್ಲ ಎಂದು ಜಿ.ಟಿ.ದೇವೇಗೌಡ ಎಚ್ಚರಿಸಿದರು.

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ

ಬೀದಿ ನಾಯಿಗಳ ಹಾವಳಿಗಳ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಯಾವ ಗ್ರಾಮಗಳಲ್ಲಿ ನಾಯಿಗಳ ಹಾವಳಿ ಇದೆ ಎಂಬುದನ್ನು ಪರಿಶೀಲಿಸಿ ನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಬೇಕು ಎಂದು ಜಿ.ಟಿ. ದೇವೇಗೌಡ ನಿರ್ದೇಶನ ನೀಡಿದರು. ಕಾಡಂಚಿನ ಗ್ರಾಮಗಳಿಂದ ಪ್ರಾಣಿಗಳು ದಾಳಿ ಮಾಡುತ್ತಿವೆ. ಇವುಗಳನ್ನು ತಡೆಯಲು ಅರಣ್ಯ ಇಲಾಖೆ ಗಮನಹರಿಸಬೇಕು ಎಂದರು.