ಜಿಲ್ಲೆ

ಯುಪಿಐಗೆ ಜಿಎಸ್​ಟಿ ಗುಮ್ಮ: ತೆರಿಗೆಗೆ ಹೆದರಿ ಸ್ಕ್ಯಾನರ್ ತೆಗೆದು ನಗದು ಪಡೆಯುತ್ತಿರುವ ವ್ಯಾಪಾರಿಗಳು! GST

GST : ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್​ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಸಣ್ಣ ವ್ಯಾಪಾರಿಗಳ ನಡುವಿನ ವಿವಾದ ತಾರಕಕ್ಕೇರಿದೆ. ಜಿಎಸ್​ಟಿ ಪಾವತಿ ಕಡ್ಡಾಯವೆಂಬ ಇಲಾಖೆ ನೋಟಿಸ್​ಗೆ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು, ಜು.23ರಿಂದ 25ರವರೆಗೆ ವ್ಯಾಪಾರ ವಹಿವಾಟು ಬಂದ್​ಗೆ ಕರೆ ನೀಡಿದ್ದಾರೆ. ಹೀಗಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಣ್ಣಪುಟ್ಟ ವ್ಯಾಪಾರಿ ಮಳಿಗೆಗಳು ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ. ಹೀಗಾದಲ್ಲಿ ಹಾಲು, ಬೇಕರಿ ಪದಾರ್ಥಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ನಗದು, ಯುಪಿಐ, ಪಿಒಎಸ್ ಮೆಷಿನ್, ಬ್ಯಾಂಕ್ ಖಾತೆ ಇತರ ಯಾವುದೇ ವಿಧಾನಗಳಿಂದ ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರೂ.ಗಳನ್ನು ಮೀರಿದರೆ ಅಂತಹ ವರ್ತಕರು ಜಿಎಸ್​ಟಿ ನೋಂದಣಿ ಪಡೆಯುವುದು ಕಡ್ಡಾಯ ಎಂದು ಹೇಳಲಾಗುತ್ತಿದೆ. ಆದರೆ, ಜಿಎಸ್​ಟಿ ಪಾವತಿಸಬೇಕೆಂಬ ಕಾರಣಕ್ಕೆ ಸಣ್ಣ ಮಾರಾಟಗಾರರು ಯುಪಿಐ ವಹಿವಾಟಿನ ಸ್ಕಾ್ಯನರ್ ತೆಗೆದು ನಗದು ಪಾವತಿಗೆ ಆದ್ಯತೆ ನೀಡುತ್ತಿದ್ದಾರೆ. ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿ 52 ರೂ. ವಸ್ತು ಖರೀದಿಸಿದರೆ 50 ರೂ. ನಗದು ರೂಪದಲ್ಲಿ ಪಡೆದು, 2 ರೂ. ಮಾತ್ರ ಯುಪಿಐ ಮಾಡುವಂತೆ ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ.

ಡಿಜಿಟಲ್ ರಶೀದಿಗಳು ಕಾನೂನುಬದ್ಧ ಜಿಎಸ್​ಟಿ ಮಿತಿ ದಾಟಿದ 14,000 ವ್ಯಾಪಾರಿಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಗುರುತಿಸಿದ್ದಾರೆ. ಈ ವ್ಯಾಪಾರಿಗಳು ಜಿಎಸ್​ಟಿ ಅಡಿ ನೋಂದಾಯಿಸಿಕೊಂಡಿಲ್ಲ. ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ವಿನಾಯಿತಿ ಪಡೆದ ಸರಕು, ಸೇವೆ ಸೇರಿರುತ್ತವೆ. ವರ್ತಕರು ಜಿಎಸ್​ಟಿ ಅಡಿ ಸಾಮಾನ್ಯ ನೋಂದಣಿ ಪಡೆದಿದ್ದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ ಸರಕು, ಸೇವೆಗಳಿಗೆ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲಿನ ಹೂಡುವಳಿ ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿ ನಿವ್ವಳ ತೆರಿಗೆ ಪಾವತಿಸಬೇಕಾಗಿರುತ್ತದೆ. ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ. ನೋಂದಾಯಿತ ವರ್ತಕರು ಇನ್ನುಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ.1 ರಂತೆ ತೆರಿಗೆ ಪಾವತಿಸುವುದು ಕಷ್ಟಕರವಾಗಲಾರದು. ಈಗಾಗಲೇ ಶೇ. 90ರಷ್ಟು ವರ್ತಕರು ರಾಜೀ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿಕೆ ಶೇ.10ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ತರವಲ್ಲ. ಜಿಎಸ್​ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಭಟನೆ ಯಾಕೆ?

ಈಗಾಗಲೇ 5,500ಕ್ಕೂ ಹೆಚ್ಚು ಮಾರಾಟಗಾರರಿಗೆ ನೋಟಿಸ್​ಗಳು ಬಂದಿವೆ. ಕೆಲವು ವ್ಯಾಪಾರಿಗಳು ಒಂದೇ ಪ್ಯಾನ್ ಕಾರ್ಡ್​ಗೆ 2 ಕೋಟಿ ರೂ.ಗೂ ಹೆಚ್ಚಿನ ಯುಪಿಐ ವಹಿವಾಟು ಲಿಂಕ್ ಮಾಡಿರುವುದನ್ನು ತೋರಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮನ್ನು ಅನ್ಯಾಯವಾಗಿ ಗುರಿಯಾಗಿಸಲಾಗಿದೆ ಮತ್ತು ಕಿರುಕುಳ, ಸರಕುಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ವ್ಯಾಪಾರಿಗಳು ಆತಂಕಗೊಂಡಿದ್ದಾರೆ.

ತಜ್ಞರ ಸಲಹೆ ಏನು?

*ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ

*ವ್ಯಾಪಾರಿಗಳ ಸಂಘಗಳೊಂದಿಗೆ ಚರ್ಚೆ ನಡೆಸಿ

*ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಬೇಕು

*ಸೂಕ್ಷ್ಮ ವ್ಯವಹಾರಗಳಿಗೆ ವಿಶ್ರಾಂತಿ ವಿಂಡೋ ನೀಡಿ

ಯಾವ್ಯಾವ ರೀತಿ ಬಂದ್?

ಜು.23: ಹಾಲು ಮಾರಾಟ ಸಂಪೂರ್ಣ ಸ್ಥಗಿತ

ಜು.24: ಗುಟ್ಕಾ ಮತ್ತು ಸಿಗರೇಟ್ ಮಾರಾಟ ನಿಷೇಧ

ಜು.25: ಬಾಗಿಲು ಮುಚ್ಚಲಿವೆ ಬೇಕರಿಗಳು, ಕಾಂಡಿಮೆಂಟ್ ಅಂಗಡಿಗಳು, ಸಣ್ಣ ಅಂಗಡಿ

ತಜ್ಞರು ಹೇಳುವುದೇನು?

* 3 ವರ್ಷದ ವ್ಯಾಪಾರ ವಹಿವಾಟಿನ ತುಲನೆ ಮೂಲಕವೇ ಜಿಎಸ್​ಟಿ ನಿರ್ಧಾರ

* ಯುಪಿಐ ಪೇಮೆಂಟ್ ನಿಷೇಧದಿಂದ ಜಿಎಸ್​ಟಿ ಪಾವತಿ ತಪು್ಪವುದಿಲ್ಲ

* ಮುಂದೆ ವಹಿವಾಟು ತುಲನೆ ಮಾಡಿದಾಗ ಪ್ರತಿ ವ್ಯವಹಾರವೂ ಬೆಳಕಿಗೆ

* 2021-22ನೇ ಹಣಕಾಸು ವರ್ಷ ಬಳಿಕ ಯುಪಿಐ ವಹಿವಾಟು ಲೆಕ್ಕಾಚಾರ

* ಹಿಂದಿನ ಇತಿಹಾಸದ ಆಧಾರದ ಮೇಲೆಯೇ ಜಿಎಸ್​ಟಿ ನೋಟಿಸ್ ಜಾರಿ

ಹಣದ ಬೇಡಿಕೆ, ಇಲಾಖೆ ಎಚ್ಚರಿಕೆ

ಕೆಲವು ಮಧ್ಯವರ್ತಿಗಳು ಸಹಾಯ ಮಾಡುವ ನೆಪದಲ್ಲಿ ವರ್ತಕರ ಬಳಿ ಹಣದ ಬೇಡಿಕೆಯಿಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಕರಣ ಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಲು ಬದ್ಧವೆಂದು ವಾಣಿಜ್ಯ ತೆರಿಗೆ ಇಲಾಖೆ ಎಚ್ಚರಿಸಿದೆ. ನೆರವು ನೀಡುವ ನೆಪದಲ್ಲಿ ಹಣ ಕೇಳಿದ ಪ್ರಕರಣಗಳನ್ನು ವ್ಯಾಪಾರಸ್ಥರು ಇಲಾಖೆ ಗಮನಕ್ಕೆ ತರಬೇಕು. ದೂರವಾಣಿ ಸಂಖ್ಯೆ 1800 425 6300 (ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 8 ರಿಂದ 8ರವರೆಗೆ)ಕ್ಕೆ ಸಂರ್ಪಸಬಹುದಾಗಿದೆ.

ಸಣ್ಣ, ಅತಿಸಣ್ಣ ವ್ಯಾಪಾರಸ್ಥರಿಗೆ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್​ಟಿ ಶಾಕ್ ನೀಡಿರುವುದು ಖಂಡನೀಯ. ಜಿಎಸ್​ಟಿ ಕಾಯ್ದೆಯಡಿ ವ್ಯಾಪಾರ-ವಹಿವಾಟಿಗೆ ಹಲವು ರಿಯಾಯಿತಿಗಳಿದ್ದು, ಸಿಎಂ ಕೂಡಲೇ ಪರಿಹಾರ ಒದಗಿಸಬೇಕು. | ಬಸವರಾಜ ಬೊಮ್ಮಾಯಿ ಸಂಸದ ಎಲ್ಲ ವಹಿವಾಟನ್ನು ನಗದಿನಲ್ಲೇ ನಡೆಸಿದರೆ ನಾವು ಇನ್ನೂ 5 ವರ್ಷ ಹಿಂದೆ ಹೋಗುತ್ತೇವೆ. ಕಪ್ಪು ಹಣ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೆ ಚಿಲ್ಲರೆ ಸಮಸ್ಯೆ ಕಾಡಬಹುದು. ಈಗಾಗಲೇ ಡಿಜಿಟಲ್ ವಹಿವಾಟಿನ ಮೂಲಕ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. ಚಿಕ್ಕ ಗೂಡಂಗಡಿ ವ್ಯಾಪಾರಿ, ಹೂ, ತರಕಾರಿ ಮಾರಾಟಗಾರರಲ್ಲೂ ಯುಪಿಐ ಪೇಮೆಂಟ್ ಇದೆ. ಹೀಗಿರುವಾಗ ಶೇ.1 ಜಿಎಸ್​ಟಿಗೋಸ್ಕರ ಯುಪಿಐ ವಹಿವಾಟು ಸ್ಥಗಿತಗೊಳಿಸುವ ಬದಲು ಜನರು ಭಯಭೀತರಾಗುವುದನ್ನು ನಿಲ್ಲಿಸಿ, ಕಾನೂನುಬದ್ಧವಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ. ಕೆಲವೊಮ್ಮೆ ಜಿಎಸ್​ಟಿ ಕಡಿಮೆ ಬೀಳುವ ಸಾಧ್ಯತೆಯೂ ಇದೆ. ಆದ್ದರಿಂದ ಜನರಿಗೆ ತಿಳಿಹೇಳುವ ಕೆಲಸ ಆಗಬೇಕು. | ಮಲ್ಲಿಕಾರ್ಜುನ ಕೆ. ತೆರಿಗೆ ಸಲಹೆಗಾರರು