ಜಿಲ್ಲೆ

ಯುವಪೀಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಅರಿವು ಅಗತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಯುವ ಪೀಳಿಗೆ ವಿದ್ಯಾಭ್ಯಾಸದ ಜತೆಗೆ ಸಂಸತಿ ಮತ್ತು ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆದು ಅಥವಾ ಉದ್ಯಮ ಸ್ಥಾಪಿಸುವ ಮೂಲಕ ಸಮಾಜದ ಋಣವನ್ನು ತೀರಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಹಿರಿಯ ಲೆಕ್ಕಪರಿಶೋಧಕ ಸಿ.ಎ.ಕಮಲಾಕ್ಷ ಕಾಮತ್​ ಹೇಳಿದ್ದಾರೆ.

ಅಂಬಾಗಿಲು ಅಮೃತ ಗಾರ್ಡನ್​ ಆಡಿಟೋರಿಯಂನಲ್ಲಿ ಜಿಎಸ್​ಬಿ ಸಮಾಜ ಹಿತರಕ್ಷಣಾ ವೇದಿಕೆ ಮತ್ತು ಮುದರಂಗಡಿ ಸಮರ್ಪಣಾ ಚಾರಿಟೇಬಲ್​ ಟ್ರಸ್ಟ್​ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ 11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಪೋಷಕ ನಿಧಿಯ ಅಧ್ಯಕ್ಷ ಸಿಎ ಎಸ್​.ಎಸ್​.ನಾಯಕ್​ ಆಧ್ಯಕ್ಷತೆ ವಹಿಸಿ, ವಿದ್ಯಾಭ್ಯಾಸಕ್ಕೆ ನೀಡುವ ನೆರವು ಸಮಾಜದ ಏಳಿಗೆಗೆ ವಿನಿಯೋಗವಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಉದ್ಯೋಗ ಪಡೆಯುವಲ್ಲಿ ತೃಪ್ತಿ ಪಟ್ಟುಕೊಳ್ಳದೆ ಉದ್ಯಮಶೀಲತೆ ಮೂಲಕ ನೂರಾರು ಜನರಿಗೆ ಉದ್ಯೋಗ ದೊರಕಿಸುವ ಕೆಲಸ ಮಾಡಬೇಕು ಎಂದರು.

ಸಾಗರದ ಉದ್ಯಮಿ ಶಿವಾನಂದ ಭಂಡಾರ್ಕರ್​ ಮಾತನಾಡಿದರು. ಬೆಂಗಳೂರಿನ ಉದ್ಯಮಿ ಬೇಲಾಡಿ ಜಯವಂತ ಕಾಮತ್​, ಶಿವಮೊಗ್ಗದ ಸಾಮಾಜಿಕ ಮುಂದಾಳು ಮಹಿಳಾ ಉದ್ಯಮಿ ರೀತಾಪ್ರಕಾಶ್​ ಪ್ರಭು ಮುಖ್ಯ ಅತಿಥಿಗಳಾಗಿದ್ದರು. ತ್ರಿಷಾ ವಿದ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ್ಣ ಭಟ್​ ಮತ್ತು ಸರ್ಜನ್​ ಡಾ. ಸುರೇಶ್​ ಶೆಣೈ ಅವರಿಂದ ಶೈಕ್ಷಣಿಕ ಪ್ರೇರಣ ಕಾರ್ಯಗಾರ ನಡೆಯಿತು.

ಈ ಸಂದರ್ಭದಲ್ಲಿ ಸಮಾಜದ ಆಸಹಾಯಕ ಹಿರಿಜೀವಗಳು ಗೌರವಯುತವಾಗಿ ಬದುಕಲು ಶಾಶ್ವತನೆಲೆ ಕಲ್ಪಿಸುವ ವಯೋ-ವಂದನ ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆಗೆ ನಿವೇಶನ ಖರೀದಿಗೆ 22 ದಾನಿಗಳು ತಲಾ 70 ಸಾವಿರ ರೂ. ಚೆಕ್​ ಹಸ್ತಾಂತರಿಸಿದರು. ಜಿಎಸ್​ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್​ ಹೆಗ್ಡೆ ಕೋಟ ಸ್ವಾಗತಿಸಿ ಪ್ರಾಸ್ತವನೆಗೈದರು. ಸಂಚಾಲಕ ಆರ್​. ವಿವೇಕಾನಂದ ಶೆಣೈ ವಯೋವಂದನಾ ಯೋಜನೆಗಳ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್​ ಕಾರ್ಯಕ್ರಮ ನಿರೂಪಿಸಿದರು, ಕಾಪು ಹರೀಶ್​ ನಾಯಕ್​ ವಂದಿಸಿದರು.