ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳೊಂದಾದ ಗೃಹ ಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಯು ನೋಂದಣಿ ಮಾಡಿಕೊಳ್ಳುವದರ ಮೂಲಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರಕುವಂತೆ ಮಾಡುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆÀ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ನುಡಿದರು.
ನಗರದ ಅಂಬೇಡ್ಕರ ಭವನದಲ್ಲಿ ಬುಧವಾರ ಜರುಗಿದ ಗೃಹ ಲಕ್ಷ್ಮಿ ಯೋಜನೆಯ ಪ್ರಜಾ ಪ್ರತಿನಿಧಿಗಳಿ ಮೊಬೈಲ್ ಆಪ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೃಹ ಲಕ್ಷ್ಮೀ ಯೋಜನೆಯಡಿ ಗದಗ ಜಿಲ್ಲೆಯು ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯವು ಪ್ರತಿಶತ ನೂರರಷ್ಟು ಪ್ರಗತಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಇಂದು ಹಮ್ಮಿಕೊಳ್ಳಲಾದ ಗೃಹ ಲಕ್ಷ್ಮೀ ಯೋಜನೆಯ ಮೊಬೈಲ್ ಆಪ್ ಬಳಕೆ ಕುರಿತು ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯಡಿ ನೋಂದಣಿ ಆಗದೇ ಇರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ನೋಂದಣಿ ಕಾರ್ಯ ಮಾಡುವದರ ಮೂಲಕ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯನ್ನು ಮಾದರಿಯನ್ನಾಗಿಸಲು ಕರೇ ನೀಡಿದರು.
ಬಡ ಜನರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿಸುವ ಮಹತ್ವಾಕಾಂಕ್ಷಯೊಂದಿಗೆ ಮನೆ ಯಜಮಾನಿಗೆ ಪ್ರತಿ ಮಾಹೆ ಎರಡು ಸಾವಿರ ರೂ. ಒದಗಿಸುವ ಯೋಜನೆ ಗೃಹ ಲಕ್ಷ್ಮೀಯಾಗಿದೆ. ಈ ಯೋಜನೆಯಡಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯದಲ್ಲಿ ಯಾವುದೇ ಫಲಾಪೇಕ್ಷಗಳನ್ನು ಬಯಸದೇ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸಚಿವರಾದ ಎಚ್.ಕೆ.ಪಾಟೀಲ ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.